ಮೋಗಾ(ಪಂಜಾಬ್):18 ವರ್ಷದ ಬಾಸ್ಕೆಟ್ಬಾಲ್ ಆಟಗಾರ್ತಿಯ ಮೇಲೆ ಮೂವರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಆಕೆಯನ್ನು ಕ್ರೀಡಾಂಗಣದ ಮೇಲ್ಛಾವಣಿಯಿಂದ ಕೆಳಗೆ ತಳ್ಳಿದ್ದಾರೆ. ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಕಳೆದ ಆಗಸ್ಟ್ 12ರಂದು ಘಟನೆ ನಡೆದಿದೆ.
ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಆಟಗಾರ್ತಿ ಲುಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಎರಡೂ ಕಾಲುಗಳು ಹಾಗೂ ದವಡೆಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಬಾಲಕಿಗೆ ಥಳಿಸಿ, ವೈದ್ಯರಿಂದ ಗರ್ಭಪಾತ
ಸಂತ್ರಸ್ತೆಯ ತಂದೆ ಪ್ರತಿಕ್ರಿಯಿಸಿ, ಮಗಳು ಬಾಸ್ಕೆಟ್ಬಾಲ್ ಅಭ್ಯಾಸಕ್ಕಾಗಿ ಮೋಗಾದಲ್ಲಿನ ಕ್ರೀಡಾಂಗಣಕ್ಕೆ ಹೋಗಿದ್ದಳು. ಈ ವೇಳೆ ಮೂವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಸುಮಾರು 25 ಅಡಿ ಎತ್ತರದ ಮೇಲ್ಛಾವಣಿಯಿಂದ ತಳ್ಳಿದ್ದಾರೆಂದು ಹೇಳಿದರು.
ಪ್ರಕರಣದಲ್ಲಿ ಜತಿನ್ ಹಾಗೂ ಆತನ ಇಬ್ಬರು ಸಹಚರರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 307(ಕೊಲೆ ಯತ್ನ), 376(ಅತ್ಯಾಚಾರ) ಸೇರಿದಂತೆ ಅನೇಕ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.