ಕೊಪ್ಪಳ: ನರ್ಸರಿ ಮಾಡಲು ಭೂಮಿ ಕೊಡಿಸುವುದಾಗಿ ಕರೆಸಿಕೊಂಡು ಹಣ ದೋಚಿದ್ದ ಆರೋಪಿಯನ್ನು ಅಳವಂಡಿ ಪೊಲೀಸರು ಬಂಧಿಸಿದ್ದಾರೆ.
ಓದಿ: ಸಿನಿಮೀಯ ಶೈಲಿಯಲ್ಲಿ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಹಲವರಿಗೆ ಗಾಯ, ದವಸ-ಧಾನ್ಯ ಭಸ್ಮ
ಹರಪನಹಳ್ಳಿ ತಾಲೂಕಿನ ಯಲ್ಲಾಪುರದ ಕೆ.ಮಲ್ಲಿಕಾರ್ಜುನ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 6,97,800 ರೂಪಾಯಿ ನಗದು ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ:
ಆಂಧ್ರದ ಕದ್ರಿ ಸೈದಾಪುರಂನ ಇ.ರವಿ ಎಂಬಾತ ಮದನಪಲ್ಲಿಯ ವಂಜಗಲಿ ಅಂಜಿ ಎಂಬುವವರಿಗೆ ವೆಂಕಟೇಶ ಎಂದು ಪರಿಚಯ ಮಾಡಿಕೊಂಡು ಕೊಪ್ಪಳ ಜಿಲ್ಲೆಯಲ್ಲಿ ನರ್ಸರಿ ಮಾಡಲು ಕಡಿಮೆ ದರಕ್ಕೆ ಭೂಮಿ ಕೊಡಿಸುವುದಾಗಿ ಹೇಳಿ ಕಳೆದ ತಿಂಗಳ 30ರಂದು ಕರೆಸಿಕೊಂಡಿದ್ದ. ಹಣದೊಂದಿಗೆ ವಂಜಗಲಿ ಅಂಜಿ ಹಾಗೂ ಆತನ ಪತ್ನಿ ಕೊಪ್ಪಳಕ್ಕೆ ಬಂದಿದ್ದರು.
ಅವರನ್ನು ಆರೋಪಿ ರವಿ ಕೊಪ್ಪಳ ತಾಲೂಕಿನ ಹಲಗೇರಿ ಕ್ರಾಸ್ ಮೂಲಕ ಹಣವಾಳ ಕಡೆಗೆ ಕರೆದುಕೊಂಡು ಹೋಗಿ ಕೆ.ಮಲ್ಲಿಕಾರ್ಜುನ ಹಾಗೂ ಇತರೆ ಮೂವರ ಸಹಾಯದೊಂದಿಗೆ ಬೈಕ್ನಲ್ಲಿ ಅಡ್ಡಗಟ್ಟಿ ವಂಜಗಲಿ ಅಂಜಿ ಅವರಿಂದ 8.5 ಲಕ್ಷ ಹಣ ಹಾಗೂ 2 ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ.
ಈ ಕುರಿತಂತೆ ವಂಜಗಲಿ ಅಂಜಿ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸ್ಪಿ ಟಿ.ಶ್ರೀಧರ್, ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ ನೇತೃತ್ವದಲ್ಲಿ ಪ್ರಕರಣದ ಬೆನ್ನು ಹತ್ತಿದ ಅಳವಂಡಿ ಪೊಲೀಸರು, ಆರೋಪಿತರಲ್ಲಿ ಹರಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ ಕೆ.ಮಲ್ಲಿಕಾರ್ಜುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ದೋಚಿಕೊಂಡು ಹೋದ ನಗದು ಹಣದ ಪೈಕಿ 6,97,800 ರೂಪಾಯಿ ನಗದು ಹಾಗೂ ಎರಡು ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನುಳಿದ ನಾಲ್ವರು ಆರೋಪಿತರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ.