ಬೆಂಗಳೂರು: ಉದ್ಯಮಿಗಳಿಗೆ ನೂರಾರು ಕೋಟಿ ಲೋನ್ ಕೊಡಿಸುವುದಾಗಿ ನಂಬಿಸಿ 5.85 ಕೋಟಿ ರೂಪಾಯಿ ಪಡೆದು ವಂಚಿಸಿ ಪರಾರಿಯಾಗಿದ್ದ ಐವರು ಅಂತಾರಾಜ್ಯ ವಂಚಕರನ್ನು ಬಂಧಿಸುವಲ್ಲಿ ಸುದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಿರೀಶ್ ಎಂಬುವರು ನೀಡಿದ ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಾಗಿತ್ತು. ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ಇನ್‌ಸ್ಟೆಕ್ಟರ್ ನಟರಾಜ್ ತಂಡ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಅಬ್ದುಲ್ ಜಮಾಕ್ ಸೈಯದ್ ಇಬ್ರಾಹಿಂ, ಕೊಯಮತ್ತೂರಿನ ವಿವೇಕಾನಂದ, ಕನ್ಯಾಕುಮಾರಿಯ ಶಿವರಾಮ್, ತಮಿಳುನಾಡಿನ ರಘುವರನ್ ಹಾಗೂ ದಿಂಡಿಗಲ್ ರಾಘವನ್ ಎಂಬುವರನ್ನು ಬಂಧಿಸಿದ್ದಾರೆ. ಇದೇ ವೇಳೆ, ಬಂಧಿತ ಆರೋಪಿಗಳಿಂದ 4 ಕೋಟಿ ರೂಪಾಯಿ ಮೌಲ್ಯದ 8 ಕೆ.ಜಿ 215 ಗ್ರಾಂ ಚಿನ್ನ, ದುಬಾರಿ ಬೆಲೆಯ ಎರಡು ಕಾರು ಹಾಗೂ 33 ಲಕ್ಷ ನಗದು ಜಪ್ತಿ ಮಾಡಲಾಗಿದೆ.
ವಂಚನೆ ಎಸಗುವ ತಿಂಗಳ ಹಿಂದಷ್ಟೇ ರಾಜಧಾನಿಗೆ ಬಂದಿದ್ದ ಆರೋಪಿಗಳು
ಪೂರ್ವ ನಿಯೋಜಿತವಾಗಿ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಕಳೆದ ಅಕ್ಟೋಬರ್‌ನಲ್ಲಿ ಸುದ್ದುಗುಂಟೆಪಾಳ್ಯದಲ್ಲಿ ಮನೆ ಬಾಡಿಗೆ ಪಡೆದಿದ್ದರು. ಏಸ್ ವೆಂಚರ್ಸ್ ಹೆಸರಿನಲ್ಲಿ ಕಂಪನಿ ತೆರದಿದ್ದರು. ಪೋನ್ ಮೂಲಕವೇ ಉದ್ಯಮಿಗಳು ಹಾಗೂ ಮದ್ಯವರ್ತಿಗಳ ನಡುವೆ ಸಭೆ ಕರೆದಿದ್ದರು. ಇದರಂತೆ ಬೆಂಗಳೂರು ಮೂಲದ ಗಿರೀಶ್ ಹಾಗೂ ಅರುಣಾಚಲಪ್ರದೇಶ ಮೂಲದ ಫಣಿವರನ್ ಎಂಬುವರು ಅನುಕ್ರಮವಾಗಿ 150 ಹಾಗೂ 250 ಕೋಟಿ ಸಾಲ ಕೇಳಿದ್ದರು.
ವೃತ್ತಿಪರ ಕಂಪನಿ ಎಂದು ಬಿಂಬಿಸಿಕೊಳ್ಳಲು ಅಧಿಕಾರಿಗಳಂತೆ ತಪಾಸಣೆ ನಡೆಸಿ ಸಾಲ ಮಂಜೂರಾತಿ ಮಾಡುವುದಾಗಿ ನಂಬಿಸಿದ್ದಾರೆ. ನ.16ರಂದು ಮೂರು ತಿಂಗಳ ಬಡ್ಡಿ ಹಣ ಮುಂಗಡವಾಗಿ ಹೇಳಿ ಓರ್ವ ಉದ್ಯಮಿಯಿಂದ 2.25 ಕೋಟಿ ಹಾಗೂ ಮತ್ತೋರ್ವ ಉದ್ಯಮಿಯಿಂದ 3.60 ಕೋಟಿ ರೂಪಾಯಿ ಪಡೆದುಕೊಂಡು ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಸಂಬಂಧ ದೂರುದಾರರು ನ.18ರಂದು ನೀಡಿದ ದೂರಿನ ಸುದ್ದು ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.