ಮುಂಬೈ :ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದೆ.
ಸ್ಫೋಟಕಗಳು ತುಂಬಿದ್ದ ಎಸ್‌ಯುವಿ ಕಾರನ್ನು ಅಂಬಾನಿ ಅವರ ಅಂಟಿಲಿಯಾ ನಿವಾಸ ಸಮೀಪ ನಿಲ್ಲಿಸುವ ದಿನದಂದು ವಾಜೆ, ಇಂದೊಂದು ರಹಸ್ಯ ಕಾರ್ಯಾಚರಣೆ (secret operation) ಎಂದು ತನ್ನ ಅಧಿಕೃತ ಚಾಲಕನಿಗೆ ಹೇಳಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಎನ್ಐಎ ತಿಳಿಸಿದೆ.
ಇದೇ ಫೆಬ್ರವರಿ 25ರಂದು ನಡೆದಿದ್ದ ಘಟನೆಯಲ್ಲಿ ಸಚಿನ್ ವಾಜೆ ಹಾಗೂ ಇತರೆ 9 ಮಂದಿ ಆರೋಪಿಗಳಿಗೆ ಇರುವ ಸಂಪರ್ಕದ ಬಗ್ಗೆ ಚಾಲಕನ ಹೇಳಿಕೆಯನ್ನು ಎನ್ಐಎ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ. ಅದನ್ನೀಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಫೆಬ್ರವರಿ 24 ಮತ್ತು 25ರ ಮಧ್ಯರಾತ್ರಿಯಂದು ಅಂಬಾನಿ ಮನೆಯ ಬಳಿ ವಾಹನವನ್ನು ನಿಲ್ಲಿಸುವ ವಿಚಾರದ ಸಂಪೂರ್ಣ ಮಾಹಿತಿಯನ್ನು ಚಾಲಕ ಎನ್‌ಐಎಗೆ ವಿವರಿಸಿದ್ದಾರೆ.
ಫೆಬ್ರವರಿ 24ರ ಸಂಜೆ 5.30ರ ಸುಮಾರಿಗೆ ಮಹಾರಾಷ್ಟ್ರದ ಹಿಂದಿನ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಅಧಿಕೃತ ನಿವಾಸವಾದ 'ಜ್ಞಾನೇಶ್ವರಿ' ಬಂಗಲೆಗೆ ಸಚಿನ್ ವಾಜೆ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಯಿತು. ವಾಜೆ ಅವರು ದೇಶ್‌ಮುಖ್ ಅವರ ನಿವಾಸಕ್ಕೆ ಹೋಗಿ 1 ಗಂಟೆ ನಂತರ ಹೊರ ಬಂದರು.
ಇದಾದ ಬಳಿಕ ಅಂಬಾನಿ ಅವರ ಮನೆ ಮುಂದೆ ನಿಲ್ಲಿಸಬೇಕಿದ್ದ ಸ್ಫೋಟಕಗಳನ್ನು ತುಂಬಿದ್ದ ಮಹೀಂದ್ರಾ ಸ್ಕಾರ್ಪಿಯೋ ಕಾರು ಹಾಗೂ ಇನ್ನೋವಾ ಕಾರಿನ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸುವಂತೆ ವಾಜೆ ತಮಗೆ ತಿಳಿಸಿದ್ದರು ಎಂದು ತನಿಖಾಧಿಕಾರಿಗಳಿಗೆ ಚಾಲಕ ತಿಳಿಸಿದ್ದಾನೆ.