ಲಖನೌ:ಉತ್ತರ ಪ್ರದೇಶ ಸರ್ಕಾರಕ್ಕೆ ಹಾಗೂ ಉದ್ಯಮಿಯೊಬ್ಬರಿಗೆ ವಂಚಿಸಿ ಪರಾರಿಯಾಗಿದ್ದ ಐಪಿಎಸ್ ಅಧಿಕಾರಿ ಅರವಿಂದ್ ಸೇನ್ ಇದೀಗ ಲಖನೌ ಕೋರ್ಟ್ ಮುಂದೆ ಶರಣಾಗಿದ್ದಾರೆ. ಜನವರಿ 31ರಂದು ನಿವೃತ್ತಿ ಹೊಂದಲಿರುವ ಸೇನ್ ಅವರನ್ನು ನ್ಯಾಯಾಲಯ ಫೆ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
2017ರಲ್ಲಿ ಮಧ್ಯಪ್ರದೇಶ ಮೂಲದ ಉದ್ಯಮಿ ಮಂಜೀತ್ ಸಿಂಗ್ ಭಾಟಿಯಾ ಎಂಬವರು ಅರವಿಂದ್ ಸೇನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಪೊಲೀಸರಿಗೆ ಉತ್ತರ ಪ್ರದೇಶ ಪಶುಸಂಗೋಪನಾ ಇಲಾಖೆಯ ಹೆಸರಿನಲ್ಲಿ ನಕಲಿ ಟೆಂಡರ್ ಕರೆದು ಭಾಟಿಯಾಗೆ 9.72 ಕೋಟಿ ರೂ. ವಂಚಿಸಿರುವುದು ತಿಳಿದು ಬಂದಿತ್ತು.
ಇದನ್ನೂ ಓದಿ: ಬೇರೆ - ಬೇರೆ ಮದುವೆ ಬಳಿಕ ಲವ್ನಲ್ಲಿ ಬಿದ್ದರು.. ನಂತರ ನೇಣಿಗೆ ಶರಣಾದ ಪ್ರೇಮಿಗಳು!
2020 ರ ಡಿಸೆಂಬರ್‌ನಲ್ಲಿ ಸೇನ್ರನ್ನು ದೋಷಿ ಎಂದು ಲಖನೌ ಕೋರ್ಟ್ ಘೋಷಿಸಿತ್ತು. ಇದರ ಬೆನ್ನಲ್ಲೇ ಸೇನ್ರನ್ನು ಅವರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯಿಂದ ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಪ್ರಕರಣ ಸಂಬಂಧ ಯುಪಿ ಪೊಲೀಸರು ಈವರೆಗೆ ಪತ್ರಕರ್ತರು ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಆದರೆ, ಅರವಿಂದ್ ಸೇನ್ ಪರಾರಿಯಾಗಿದ್ದು, ಇವರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಇದೀಗ ಅವರೇ ಕೋರ್ಟ್ ಮುಂದೆ ಶರಣಾಗಿದ್ದಾರೆ.