ಚಿಕ್ಕಬಳ್ಳಾಪುರ: ಟಿಪ್ಪರ್ ಲಾರಿ ಚಾಲಕನ ಅತಿಯಾದ ವೇಗದಿಂದ ರಸ್ತೆಯ ಪಕ್ಕದಲ್ಲಿ ಮೇಯುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಲ್ಲೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ತಾಲ್ಲೂಕಿನ ನಗರಗೆರೆ ಗ್ರಾಮದ ನಿವಾಸಿಗಳಾದ ರಘು ಬಿನ್ ವೆಂಕಟಪ್ಪ ಹಾಗೂ ಆಶ್ವತ್ಥಪ್ಪ ಬಿನ್ ನಾರಾಯಣಪ್ಪ ಅವರಿಗೆ ಸೇರಿದ 4 ಲಕ್ಷ ಮೌಲ್ಯದ 30ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.
ಇಬ್ಬರಿಗೂ ಸೇರಿದ ಸುಮಾರು 60 ಕುರಿಗಳನ್ನು ಪ್ರತಿನಿತ್ಯದಂತೆ ಮೇಯಿಸಲು ಹೋಗಿದ್ದಾರೆ. ಇಂದು ವಾಟದಹೊಸಹಳ್ಳಿ - ನಗರಗೆರೆ ರಸ್ತೆಯ ಮಲ್ಲೇನಹಳ್ಳಿ ಕ್ರಾಸ್ ಬಳಿ ರಸ್ತೆಯ ಅಂಚಿನಲ್ಲಿ ಕುರಿಗಳನ್ನು ಮೇಯುಸುತ್ತಿದ್ದ ವೇಳೆ ಏಕಾಏಕಿ ಗುಡಿಬಂಡೆ ಕಡೆಯಿಂದ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ AP 02 TD 2079 ಸಂಖ್ಯೆಯ ಟಿಪ್ಪರ್ ಲಾರಿ ನಗರಗೆರೆ ಕಡೆಗೆ ತೆರಳಲು ಬಂದಾಗ ಕುರಿಗಳು ಏಕಾಏಕಿ ರಸ್ತೆಗೆ ಬಂದಿದ್ದು, ಟಿಪ್ಪರ್ ಚಾಲಕನ ಅತಿವೇಗದಿಂದ ಕುರಿಗಳ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ 30 ಕುರಿಗಳು ಸಾವನ್ನಪ್ಪಿದ್ದು 8 ಕುರಿಗಳಿಗೆ ತೀವ್ರ ಗಾಯಗಳಾಗಿವೆ.
ಸದ್ಯ ಘಟನೆಯಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದು ನಮಗೆ ನ್ಯಾಯ ದೊರೆಕಿಸಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಇನ್ನು, ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಕುರಿ ಮರಿಯೂ ದಾರುಣವಾಗಿ ಸಾವನ್ನಪ್ಪಿದ್ದು ನೋಡುಗರ ಮನಕಲುಕುವಂತಿತ್ತು. ನಡು ರಸ್ತೆಯಲ್ಲಿ ರೈತನ ಮುಂದೆಯೇ ಕುರಿಗಳು ಸಾವನ್ನಪ್ಪಿದ್ದು ಜೀವನಧಾರಕ್ಕೆ ಇದ್ದ ಆಧಾರ ಕಳೆದುಕೊಳ್ಳುವಂತಿತ್ತು. ಸದ್ಯ ಸರ್ಕಾರದಿಂದ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಇಬ್ಬರು ರೈತರು ಸ್ಥಳಕ್ಕೆ ಬಂದಿದ್ದ ಪೊಲೀಸರಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.