ಮುಂಬೈ:ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶದಲ್ಲಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎನ್ಐಎ ವಿಶೇಷ ಕೋರ್ಟ್ ಆದೇಶ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ಮುಂಬೈನ ಮುಖೇಶ್ ಅಂಬಾನಿಯ ನಿವಾಸ ಆ್ಯಂಟಿಲಿಯಾ ಹೊರಗೆ ಸ್ಫೋಟಕ ಇರಿಸಿದ್ದ ಆರೋಪದಲ್ಲಿ ವಿಚಾರಣೆಗಾಗಿ ಸಚಿನ್ ವಾಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಮತ್ತೊಬ್ಬ ಟಿಎಂಸಿ ಕಾರ್ಯಕರ್ತನ ಹತ್ಯೆ: ಬಿಜೆಪಿಯಿಂದ ಕೃತ್ಯ ಆರೋಪ
ಸಚಿನ್ ವಾಜೆ ಮಾರ್ಚ್ 13 ರಂದು ಬಂಧಿತನಾಗಿದ್ದ. ಇದಕ್ಕೂ ಮೊದಲು ಹೆಚ್ಚಿನ ವಿಚಾರಣೆಗೆ ಎನ್ಐಎ ಅಧಿಕಾರಿಗಳು ಎನ್ಐಎ ಕೋರ್ಟ್ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಏಪ್ರಿಲ್ 7ರವರೆಗೆ ಆರೋಪಿಯನ್ನು ಎನ್ಐಎ ಕಸ್ಟಡಿಗೆ ನೀಡಿತ್ತು. ಏ.7 ರಂದು ಮತ್ತೆ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿನವರೆಗೂ ಪೊಲೀಸರ ಕಸ್ಟಡಿಗೆ ಒಪ್ಪಿಸಿತ್ತು. ಇಂದಿಗೆ ಎನ್ಐಎ ಅವಧಿ ಮುಕ್ತಾಯವಾಗಿರುವ ಹಿನ್ನೆಲೆ ಮತ್ತಷ್ಟು ವಿಚಾರಣೆಗಾಗಿ ಕೋರ್ಟ್ಗೆ ಮನವಿ ಮಾಡಲಾಗಿತ್ತು. ಆದರೆ ಕೋರ್ಟ್ ಎನ್ಐಎ ಮನವಿ ತಿರಸ್ಕರಿಸಿ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.