ಆಗ್ರಾ:ಆಗ್ರಾ ಜಿಲ್ಲೆಯ ಪ್ರತಾಪ್ ಪುರ ಗ್ರಾಮದಲ್ಲಿ ಸೆಪ್ಟಿಕ್ ಟ್ಯಾಂಕ್ ಗುಂಡಿ ಅಗೆಯುತ್ತಿದ್ದಾಗ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ದುರ್ಮರಣಕ್ಕೆ ಈಡಾಗಿದ್ದಾರೆ.
ಅಗೆದಿದ್ದ ಗುಂಡಿ ಮೇಲಿನಿಂದ ಮಣ್ಣು ಕುಸಿದಾಗ ಸೆಪ್ಟಿಕ್ ಟ್ಯಾಂಕ್ ಒಳಗೆ ಇದ್ದ ನಾಲ್ವರು ಮೃತಪಟ್ಟಿದ್ದಾರೆ. ಮಣ್ಣೊಳಗೆ ಸಿಲುಕಿದ್ದವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬನೂ ಬಲಿಯಾಗಿದ್ದಾನೆ. ದುರ್ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತರ ನಾಲ್ವರನ್ನು ಚಿಕಿತ್ಸೆಗೆ ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸುವಾಗಲೇ ಇವರೂ ಮೃತಪಟ್ಟಿದ್ದರು ಎಂದು ಆಗ್ರಾದ ಜಿಲ್ಲಾ ಅಧಿಕಾರಿ ಪ್ರಭು ಎನ್. ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಕೇಸ್: 'ನಕಲಿ' ಸಂಘಟನೆ ಹೆಸರು ಬಳಸಿದವರ ವಿರುದ್ಧ ಕ್ರಮ ಅಗತ್ಯ ಎಂದ ನಿವೃತ್ತ ಎಸಿಪಿ
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮೃತರನ್ನು ಹರಿ ಮೋಹನ್ (17), ಅನುರಾಗ್ (14), ಮತ್ತು ಅವಿನಾಶ್ (16) ಎಂದು ಗುರುತಿಸಲಾಗಿದೆ. ಮೂವರೂ ಸಹೋದರರು ಸುರೇಂದ್ರ ಶರ್ಮಾ ಅವರ ಪುತ್ರರಾಗಿದ್ದಾರೆ. ಸಹೋದರರ ಚಿಕ್ಕಪ್ಪ ಸೋನು ಶರ್ಮಾ (32) ಹುಡುಗರನ್ನು ರಕ್ಷಿಸಲು ಗುಂಡಿಗೆ ಇಳಿದರು. ಆ ವೇಳೆ ಅವರೂ ಮಣ್ಣಿನಡಿ ಸಿಲುಕಿ ಮೃತಪಟ್ಟರು. ನೆರೆಯ ನಿವಾಸಿ ಯೋಗೇಶ್ ಬಾಗೆಲ್ (20) ಸಹ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ.