ತುಮಕೂರು:ವ್ಯವಸ್ಥೆಯಲ್ಲಿ ಲೋಪವಾಗದಿರಲೆಂಬ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ವಿಶೇಷ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ. ಅದು ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಇಬ್ಬರಿಗೂ ಎಚ್ಚರಿಕೆ ಗಂಟೆಯಂತಾಗಿದೆ. ಪೊಲೀಸ್ ಅಧಿಕಾರಿಗಳ ಕಡೆಯಿಂದ ಲೋಪವಾದರೆ ಮುಲಾಜಿಲ್ಲದೇ ಅವರಿಗೆ ಅಮಾನತು ಶಿಕ್ಷೆ ವಿಧಿಸುತ್ತಿದ್ದಾರೆ.
ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಹೌದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಮೂವರು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿ ಅಮಾನತುಗೊಳಿಸಲಾಗಿದೆ. ಅಲ್ಲದೇ, ಸಾರ್ವಜನಿಕರು ಮತ್ತು ಪೊಲೀಸ್ ನಡುವಿನ ವ್ಯವಸ್ಥೆ ಲೋಪಗಳಾದರೆ ಎರಡೂ ಕಡೆ ಕಣ್ಣಿರಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ತುಮಕೂರು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ಅವಧಿಯಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ ಮತ್ತು ಓರ್ವ ಹೆಡ್ ಕಾನ್ಸ್ಟೇಬಲ್ ಅಮಾನತುಗೊಂಡಿದ್ದಾರೆ.ಇದರಿಂದ ಪೊಲೀಸ್ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೆಲವರಿಗೆ ಆತಂಕ ಉಂಟಾಗಿದೆ.
ಅಮಾನತುಗೊಂಡಿರುವ ಸಿಬ್ಬಂದಿಗಳಲ್ಲಿನ ಎರಡು ಪ್ರಕರಣದಲ್ಲಿ ಇಬ್ಬರೂ ಸಂಪೂರ್ಣ ತಪ್ಪು ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಆದರೆ, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ವ್ಯವಸ್ಥೆಯಲ್ಲಿ ಇಂತಹ ಲೋಪಗಳನ್ನು ಸಹಿಸುವುದಿಲ್ಲ ಎಂಬ ಸಂದೇಶ ತಲುಪಿಸಲು ಮುಂದಾಗಿದ್ದೇನೆ. ಇಂತಹ ಪ್ರಕರಣಗಳ ಹಿಂದೆ ಪೊಲೀಸ್ ಸಿಬ್ಬಂದಿ ಸಹ ಸೇರಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಅವರೆಲ್ಲರಿಗೂ ಏನು ಪಾಠ ಕಲಿಸಬೇಕಿದೆಯೋ ಅದನ್ನು ಕಲಿಸುತ್ತೇವೆ ಎಂದು ಎಸ್ಪಿ ರಾಹುಲ್ ಕುಮಾರ್ ಖಡಕ್ ಉತ್ತರ ನೀಡುತ್ತಿದ್ದಾರೆ .