ತುಮಕೂರು:ನಗರದಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಾಸಗಿ ವಸತಿಗೃಹದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯ ಕಾರ್ಯಕರ್ತರು ದಂಧೆಯ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಇಲ್ಲಿ ಮುಖ್ಯವಾಗಿ ವೇಶ್ಯಾವಾಟಿಕೆಗೆ ಇಂತಿಷ್ಟು ಎಂಬುದಾಗಿಯೂ ಕೂಡ ನಮೂದು ಮಾಡುತ್ತಿದ್ದಂಥಹ ಚೀಟಿಗಳು ಲಭ್ಯವಾಗಿವೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಗಂಟೆಗಳ ಆಧಾರದ ಮೇಲೆ ದರ ನಿಗದಿ ಮಾಡಿಕೊಂಡಿರುವುದು ಹೇಯ ಕೃತ್ಯವಾಗಿದೆ.
ಇಲ್ಲಿಗೆ ಬರುತ್ತಿದ್ದ ಅನೇಕ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ರಕ್ತದ ಸ್ಯಾಂಪಲ್ ವರದಿಯನ್ನು ಕೂಡ ದಂಧೆಕೋರರು ಪರಿಶೀಲನೆ ನಡೆಸುತ್ತಿದ್ದರು ಎಂಬುದಕ್ಕೆ ವಸತಿಗೃಹದಲ್ಲಿ ಲಭ್ಯವಾಗಿರುವ ದಾಖಲೆಗಳು ಪುಷ್ಟೀಕರಿಸುತ್ತಿವೆ.
ಅಲ್ಲದೆ ತುಮಕೂರು ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪತ್ತೆಯಾಗಿದ್ದ ರಾಶಿ ರಾಶಿ ಕಾಂಡೋಮ್ಗಳ ಜಾಡು ಹಿಡಿದು ಮೈಸೂರಿನ ಒಡನಾಡಿ ಸಂಸ್ಥೆಯು ಈ ಕಾರ್ಯಾಚರಣೆಯನ್ನು ನಡೆಸಿದ್ದೂ ಅಲ್ಲದೆ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇಂತಹ ನೀಚ ಕೃತ್ಯ ಹೀನಕೃತ್ಯ ಪತ್ತೆಯಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಇದನ್ನೂ ಓದಿ:ತುಮಕೂರಲ್ಲಿ ಕಾಂಡೋಮ್ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್.. ಲಾಡ್ಜ್ನಲ್ಲಿ ಸುರಂಗದೊಳಗೆ ವೇಶ್ಯಾವಾಟಿಕೆ ದಂಧೆ