ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಬರೋಬ್ಬರಿ 88 ಅಪಘಾತ ವಲಯಗಳನ್ನು ಗುರುತಿಸಿದೆ. ಅಲ್ಲದೇ ಅವುಗಳನ್ನು ಬ್ಲಾಕ್ ಸ್ಪಾಟ್ಗಳೆಂದು ಘೋಷಣೆ ಮಾಡಿದೆ.
ಬಹುತೇಕ ಉತ್ತರ ಕರ್ನಾಟಕ ಹಾಗೂ ಹಾಸನ, ಮಂಗಳೂರು ಭಾಗದಿಂದ ರಾಜಧಾನಿ ಬೆಂಗಳೂರು ತಲುಪಬೇಕೆಂದರೆ ತುಮಕೂರು ಜಿಲ್ಲೆಯನ್ನು ದಾಟಿ ಹೋಗಬೇಕು. ಜಿಲ್ಲೆಯಲ್ಲಿ ಕಳೆದ ವರ್ಷ 766 ಅಪಘಾತಗಳು ಸಂಭವಿಸಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕಳೆದ ಎಂಟು ತಿಂಗಳಿನಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನೇತೃತ್ವದಲ್ಲಿ ಜಿಲ್ಲಾದ್ಯಂತ ಸಮೀಕ್ಷೆ ಮಾಡಲಾಗಿದೆ. ಮೂರು ಬಾರಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ 88 ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ಅಪಘಾತಗಳು ನಡೆಯುವ 500 ಮೀಟರ್ ಸುತ್ತಳತೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.