ತುಮಕೂರು: ಆಯುರ್ವೇದ ಚಿಕಿತ್ಸೆ ಪಡೆದು ತನ್ನ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಯುವಕನ ದ್ವಿಚಕ್ರ ವಾಹನ ಸೀಜ್ ಮಾಡಿ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿರೋ ಘಟನೆ ಮಧುಗಿರಿಯಲ್ಲಿ ನಡೆದಿದ್ದು, ಸ್ಥಳೀಯ ಪತ್ರಕರ್ತರ ನೆರವಿನಿಂದ ಸಮಸ್ಯೆ ಬಗೆಹರಿದಿದೆ.
ಖಾಯಿಲೆಯಿಂದ ಬಳಲುತ್ತಿದ್ದ ಅರುಣ್ ಕುಮಾರ್ ಎಂಬ ಯುವಕ ಕಾಲ್ನಡಿಗೆಯಲ್ಲಿಯೇ ತನ್ನ ಗ್ರಾಮಕ್ಕೆ ತೆರಳುತ್ತಿದ್ದ, ಈ ವೇಳೆ ಮಾರ್ಗ ಮಧ್ಯೆ ಕೊರಟಗೆರೆ ಪಟ್ಟಣದ ಅಂಗಡಿಯೊಂದರ ಬಳಿ ಕಣ್ಣೀರಿಡುತ್ತಾ ಕುಳಿತಿದ್ದ. ಇದನ್ನ ಕಂಡ ಸ್ಥಳೀಯ ಪತ್ರಕರ್ತರಾದ ಹರೀಶ್ ಹಾಗೂ ಅವರ ಸ್ನೇಹಿತರು ಯುವಕನ ಸ್ಥಿತಿ ಕಂಡು ಮಮ್ಮುಲ ಮರುಗಿದ್ದಾರೆ.
ಚಿಕಿತ್ಸೆಗೆ ತೆರಳಿದ್ದ ಯುವಕ ಬೈಕ್ ಸೀಜ್ ನಂತರ ಕೊರಟಗೆರೆ ಪೊಲೀಸ್ ಠಾಣೆಯ ಎಎಸ್ಐ. ಯೋಗೀಶ್, ಎಸ್ಐ ಮಂಜುನಾಥ್ ಅವರನ್ನ ಸಂಪರ್ಕಿಸಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಯ ಯಡವಟ್ಟಿನಿಂದ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
ಮಧುಗಿರಿ ಪೊಲೀಸ್ ಅಧಿಕಾರಿ ಸರ್ದಾರ್ ಅವರು, ಕೂಡಲೇ ಕೆರೆಗಳ ಪಾಳ್ಯದ ಬಳಿ ಸೀಸ್ ಮಾಡಲಾಗಿದ್ದ ಅರುಣ್ ಕುಮಾರನ ಬೈಕ್ ಅನ್ನು ಕೊರಟಗೆರೆ ಪಟ್ಟಣಕ್ಕೆ ಕಳುಹಿಸಿಕೊಟ್ಟಿದ್ದಾರೆ. ಘಟನೆಗೆ ಪೊಲೀಸ್ ಅಧಿಕಾರಿಗಳು ಸಹ ತೀವ್ರ ಬೇಸರ ವ್ಯಕ್ತಪಡಿದ್ದಾರೆ.
ಘಟನೆಯ ಹಿನ್ನೆಲೆ
ಚರ್ಮರೋಗಕ್ಕಾಗಿ ಚಿಕಿತ್ಸೆ ಪಡೆಯಲು ಯುವಕ ಅರುಣ್ ಕುಮಾರ್ ಮಧುಗಿರಿ ಪಕ್ಕದ ಹಳ್ಳಿಯ ನಿವಾಸಿ ನಾರಾಯಣಪ್ಪ ಎಂಬುವರ ಬಳಿಗೆ ಆಯುರ್ವೇದಿಕ್ ಔಷಧವನ್ನು ತೆಗೆದುಕೊಳ್ಳಲು ಬೆಳಗಿನ ಜಾವ ತೆರಳಿದ್ದ. ಔಷಧ ತೆಗೆದುಕೊಂಡು ಅಲ್ಲಿಂದ ವಾಪಸ್ ತನ್ನ ಗ್ರಾಮಕ್ಕೆ ಹೊರಡುವಾಗ ಸ್ವಲ್ಪ ತಡವಾಗಿತ್ತು. ಬೆಳಗ್ಗೆ 6.30ಕ್ಕೆ ಸರಿಯಾಗಿ ಮಾರ್ಗ ಮಧ್ಯೆ ಕೆರೆಗಳ ಪಾಳ್ಯ ಚೆಕ್ ಪೋಸ್ಟ್ ಬಳಿ ಬಂದಾಗ ಪೊಲೀಸರು ಬೈಕ್ ಕಿತ್ತುಕೊಂಡಿದ್ದಾರೆ.
ವಾಸ್ತವಾಂಶದ ಕುರಿತು ಅರುಣ್ ಪೊಲೀಸರಿಗೆ ಪರಿಪರಿಯಾಗಿ ತಿಳಿಸಿದರೂ ಕೇಳುವ ವ್ಯವಧಾನ ಅವರಿಗೆ ಇರಲಿಲ್ಲ, ಬೈಕ್ ಸೀಜ್ ಮಾಡಿದ್ದಾರೆ. ನಂತರ ವಿಧಿಯಿಲ್ಲದೇ ಯುವಕ ಕಾಲ್ನಡಿಗೆಯಲ್ಲಿ ಕೊರಟಗೆರೆಗೆ ಬಂದಿದ್ದಾನೆ. ಆದರೆ ಕೊರಟಗೆರೆಯಿಂದ 40 ಕಿ.ಮೀ. ಅಂತರದಲ್ಲಿರುವ ತಾಲೂಕಿನ ಉರುಡಗೆರೆ ಗ್ರಾಮಕ್ಕೆ ತೆರಳುವುದು ಹೇಗೆ ಎಂದು ನೊಂದು ಕುಳಿತಿದ್ದಾಗ ಪತ್ರಕರ್ತರ ನೆರವಿನಿಂದ ಘಟನೆ ಬೆಳಕಿಗೆ ಬಂದಿದೆ.