ತುಮಕೂರು: ಜಿಲ್ಲೆಯ ಬಹುತೇಕ ಬಯಲುಸೀಮೆ ಪ್ರದೇಶಗಳಲ್ಲಿ ಪುಷ್ಪೋದ್ಯಮವನ್ನೇ ಅವಲಂಬಿಸಿರುವ ರೈತರು ಈ ಬಾರಿ ಬಂಪರ್ ಲಾಭ ಪಡೆಯುತ್ತಿದ್ದಾರೆ. ಮುಖ್ಯವಾಗಿ ಸೇವಂತಿ ಹೂವು ಬೆಳೆದಿರುವ ರೈತರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಲಾಕ್ಡೌನ್ ಹಾಗೂ ಕೊರೊನಾ ಸೋಂಕು ಭೀತಿಯಿಂದ ಪುಷ್ಪೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಉತ್ತಮ ಫಸಲು ದೊರೆತಿದ್ದರೂ ಸಹ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿದ್ದರಿಂದ ರೈತರು ಹೂವಿನ ಫಸಲನ್ನು ಸಂಪೂರ್ಣ ನಾಶ ಮಾಡಿದ್ದರು. ಆದರೆ, ಈ ಬಾರಿ ಮಳೆ ಹದವಾಗಿ ಬೀಳುತ್ತಿರುವುದರಿಂದ ಗುಣಮಟ್ಟದ ಸೇವಂತಿಗೆ ಹೂವು ರೈತರ ಕೈ ಸೇರುತ್ತಿದೆ. ಉತ್ಕೃಷ್ಟ ಗುಣಮಟ್ಟದ ಹೂವಿಗೂ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸುತ್ತಿದ್ದು, ರೈತರು ಆರ್ಥಿಕವಾಗಿ ಸದೃಢರಾಗುವಂತಾಗಿದೆ.