ತುಮಕೂರು : ಈ ವರ್ಷದ ಅನುದಾನ ವಾಪಸ್ಸಾಗುವ ಆತಂಕ ತುಮಕೂರು ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಕಾಡಿತ್ತು. ಈ ಬಾರಿಯ ಕೊನೆಯ ವಿಶೇಷ ಸಾಮಾನ್ಯ ಸಭೆಯಲ್ಲಿದ್ದ ಬಹುತೇಕ ಜಿ.ಪಂ. ಸದಸ್ಯರು ಈ ಕುರಿತು ಗಂಭೀರ ಚರ್ಚೆ ನಡೆಸಿದರು. ಅಲ್ಲದೆ ಅನುದಾನ ವಾಪಸ್ಸಾದ್ರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳು ನಿರ್ವಹಿಸಿದ ಕಾಮಗಾರಿಗಳನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದು ಗಮನಾರ್ಹವಾಗಿತ್ತು. ಅನುಮೋದನೆ ಪಡೆದು ಹಣ ಹಂಚಿಕೆಯಾಗಿರುವ ಸುಮಾರು 50ಕ್ಕೂ ಹೆಚ್ಚು ಕಾಮಗಾರಿಗಳ ಬದಲಾಗಿ ಇತರೆ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಲಾಯಿತು.
ಕಾಮಗಾರಿಯ ಬಿಲ್ನ್ನು ಜಿಲ್ಲಾ ಖಜಾನೆಗೆ ಸಲ್ಲಿಸಲು ಮಾರ್ಚ್ 8 ಕೊನೆ ದಿನವಾಗಿದೆ. ಅಷ್ಟರಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಹೀಗಾಗಿ ಕಾಮಗಾರಿ ಬದಲಾಯಿಸಲು ಸಾಧ್ಯವೇ ಎಂಬ ಯಕ್ಷ ಪ್ರಶ್ನೆ ಸದಸ್ಯರಲ್ಲಿ ಮೂಡಿತ್ತು. ಅಲ್ಲದೆ ಈಗಾಗಲೇ ಅನುಮೋದನೆ ದೊರೆತಿರುವ ಕಾಮಗಾರಿಗಳನ್ನು ಅತ್ಯಲ್ಪ ಅವಧಿಯಲ್ಲಿ ಪೂರ್ಣಗೊಳಿಸುವ ವೇಳೆ ಅವುಗಳ ಗುಣಮಟ್ಟದ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು.