ತುಮಕೂರು:ಕೊರೊನಾ ಸೋಂಕಿನ ಬಿಕ್ಕಟ್ಟಿನ ನಡುವೆ ಉತ್ಪತ್ತಿಯಾಗುವ ಸೋಂಕಿತರ ಪ್ರದೇಶದಲ್ಲಿನ ಕಸ ನಿರ್ವಹಣೆಯನ್ನು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅದಲ್ಲದೆ ಆಸ್ಪತ್ರೆಗಳಲ್ಲಿಯೂ ಕೂಡ ಈ ಕಸ ನಿರ್ವಹಣೆಯನ್ನು ಸಾಕಷ್ಟು ಮುತುವರ್ಜಿಯನ್ನು ವಹಿಸಿಕೊಂಡು ನಿಭಾಯಿಸಲಾಗುತ್ತಿದೆ.
ತುಮಕೂರು: ಕಂಟೋನ್ಮೆಂಟ್ ಏರಿಯಾದಲ್ಲಿ ನಿತ್ಯ ಸಂಗ್ರಹವಾಗುತ್ತಿದೆ 1.5 ಟನ್ ಕಸ.. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕಂಟೋನ್ಮೆಂಟ್ ಏರಿಯಾಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು ಪಾಲಿಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನಿತ್ಯ ಕೊರೊನಾ ಸೋಂಕಿತ ವ್ಯಕ್ತಿಗಳು ಇರುವಂತಹ ಮನೆಗಳಿಗೆ ತೆರಳುವ ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಾರೆ. ಕಂಟೋನ್ಮೆಂಟ್ ಏರಿಯಾದ ಜನರು ಕಸವನ್ನು ತಂದ ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿ ಪ್ರತ್ಯೇಕವಾದ ಡಬ್ಬಿಗಳಲ್ಲಿ ಪಾಲಿಕೆ ಸಿಬ್ಬಂದಿ ಸಂಗ್ರಹಿಸುತ್ತಾರೆ. ಪ್ರತಿನಿತ್ಯ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಂಟೋನ್ಮೆಂಟ್ ಏರಿಯಾದಿಂದ ಒಂದೂವರೆ ಟನ್ನಷ್ಟು ಕಸ ಸಂಗ್ರಹಿಸಲಾಗುತ್ತಿದೆ.
ಈ ರೀತಿ ಸಂಗ್ರಹಿಸಲಾದ ಕಸವನ್ನು ಆಳವಾದ ಗುಂಡಿ ತೋಡಿ ಸುರಿದು ಮಣ್ಣು ಮುಚ್ಚಲಾಗುತ್ತಿದೆ. ಅಕಸ್ಮಾತ್ ಈ ಕಸವನ್ನು ಸುಟ್ಟು ಹಾಕಿದರೆ ಕಲುಷಿತ ವಾತಾವರಣ ನಿರ್ಮಾಣವಾಗಲಿದೆ ಎಂಬ ಉದ್ದೇಶ ಹೊಂದಲಾಗಿದೆ. ಕಂಟೋನ್ಮೆಂಟ್ ಏರಿಯಾಗೆ ಕಸವನ್ನು ಸಂಗ್ರಹಿಸಲು ತೆರಳುವಂತಹ ಸಿಬ್ಬಂದಿಗಳಿಗೆ ಪಿಪಿಇ ಕಿಟ್ಗಳನ್ನು ನೀಡಲಾಗಿದೆ. ಆದರೆ ದಿನವಿಡಿ ಕಿಟ್ ಹಾಕಿಕೊಳ್ಳಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಖಕ್ಕೆ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಗಳನ್ನು, ಕೈಗೆ ಗ್ಲೌಸ್ ಗಳನ್ನು ಹಾಕಿಕೊಂಡು ಸಿಬ್ಬಂದಿಗಳು ಸ್ಯಾನಿಟೈಸ್ ಅನ್ನು ನಿರಂತರವಾಗಿ ಮಾಡಿಕೊಂಡು ಕಸ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಕೊರೊನಾ ಸೋಂಕಿತರ ಪ್ರದೇಶದ ಕಸ ನಿರ್ವಹಣೆಯನ್ನು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ 6.30 ರೊಳಗೆ ಬಂದು ಗುತ್ತಿಗೆ ಪಡೆದಿರುವ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಹಾಗೂ ಕೋವಿಡ್ ಕೇರ್ ಗಳಲ್ಲಿ ಕಸ ಸಂಗ್ರಹಣೆ ಮಾಡುತ್ತಾರೆ. ತುಮಕೂರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿಯೇ ನಿತ್ಯ ಕನಿಷ್ಠ 60 ಕೆಜಿ ಕಸ ಉತ್ಪಾದನೆಯಾಗುತ್ತಿದೆ. ಅದನ್ನು ಸಂಗ್ರಹಿಸುವ ಗುತ್ತಿಗೆದಾರರು ವ್ಯವಸ್ಥಿತವಾಗಿ 42 ಗಂಟೆಯೊಳಗೆ ಅದರ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ.
ಇನ್ನು ಕೊರೊನಾ ಸೋಂಕಿತರ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಇಲ್ಲದಿದ್ದರೆ ಸೋಂಕು ಹರಡುವಿಕೆ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.