ತುಮಕೂರು: ರಾಜ ಮಹಾರಾಜರ ಆಳ್ವಿಕೆ ವೇಳೆ ದೇಹ ದಂಡಿಸಲು, ಕಸರತ್ತು ಮಾಡಲು, ಉತ್ತಮ ಮೈಕಟ್ಟು ಹೊಂದಲು ಗರಡಿ ಮನೆಗಳು ಮೂಲವಾಗಿದ್ದವು. ಆದ್ರೆ ಕಾಲ ಬದಲಾದಂತೆ ಹೆಚ್ಚಿನ ಕ್ಷೇತ್ರಗಳು ಬದಲಾಗಿವೆ. ಜಿಮ್ಗಳು ತಲೆ ಎತ್ತಿವೆ. ಯುವಪೀಳಿಗೆ ಇದಕ್ಕೆ ಮಾರುಹೋಗಿದೆ. ಬೆರಳೆಣಿಕೆಯಷ್ಟು ಜೀವಂತವಾಗಿರುವ ಗರಡಿ ಮನೆಗಳು ಅವಸಾನದ ಅಂಚು ತಲುಪಿವೆ.
1942ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಪ್ರಾರಂಭವಾದ ಗರಡಿ ಮನೆ, ಒಂದು ಕಾಲದಲ್ಲಿ ಯುವಕರ ಅಚ್ಚುಮೆಚ್ಚಿನ ಅಭ್ಯಾಸ ಸ್ಥಳವಾಗಿತ್ತು. ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಏಕೈಕ ಗರಡಿ ಮನೆ. ಈ ಗರಡಿ ಮನೆಯಲ್ಲಿ ಅದೆಷ್ಟೋ ಪೈಲ್ವಾನರು ಪಳಗಿದ್ದಾರೆ.
ಈ ಗರಡಿಮನೆಯ ಸದಸ್ಯರುಗಳು ಸೇರಿಕೊಂಡು ತಾಲೂಕಿನ ಪ್ರತಿಷ್ಠಿತ ಜಾತ್ರೆಗಳಲ್ಲಿ ಒಂದಾದ ಏಕಾದಶಿ ಹಳೆಯೂರು ಆಂಜನೇಯ ಸ್ವಾಮಿಯ ಜಾತ್ರೆಯಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತಾ ಬಂದಿದ್ದು, ಇಡೀ ಕರ್ನಾಟಕಕ್ಕೆ ಈ ಗರಡಿಮನೆ ಹೆಸರುವಾಸಿಯಾಗಿದೆ. ಆದರೆ ಇಂದು ಮೂಲಸೌಕರ್ಯವಿಲ್ಲದೇ ಸೊರಗಿ ಹೋಗಿದ್ದು, ಬಹುತೇಕ ಯುವಕರು ಈ ಗರಡಿಮನೆಯಲ್ಲಿ ತಾಲೀಮು ನಡೆಸಲು ಮನಸ್ಸು ಮಾಡದಂತಾಗಿದೆ.