ತುಮಕೂರು:ಬ್ಯಾಂಕಿನಿಂದ ಪಡೆದ ಸಾಲವನ್ನು ಪಾವತಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ತುಮಕೂರು ನಗರದಲ್ಲಿ ರಾತ್ರೋರಾತ್ರಿ 35 ಬಾಡಿಗೆ ಮನೆಗಳಿಗೆ ಬೀಗ ಹಾಕಿದ ಪ್ರಕರಣ ಜಿಲ್ಲಾಧಿಕಾರಿ ಮಧ್ಯಪ್ರವೇಶದಿಂದ ತಾತ್ಕಾಲಿಕವಾಗಿ ಸುಖಾಂತ್ಯ ಕಂಡಿದೆ.
ತುಮಕೂರು ನಗರದ ಬನಶಂಕರಿಯಲ್ಲಿ ಘಟನೆ ನಡೆದಿದ್ದು, ಮಂಜುನಾಥ್ ಎಂಬಾತ ಸಾಲ ಮರುಪಾವತಿ ಮಾಡಿಲ್ಲ ಎಂದು ಆತನ ಮನೆ ಮತ್ತು ಆತನ ಮಾಲೀಕತ್ವದ 35 ಮನೆಗಳಿಗೆ ಬ್ಯಾಂಕ್ ಸಿಬ್ಬಂದಿ ಬೀಗ ಜಡಿದು, ಎಲ್ಲರನ್ನೂ ಹೊರಗೆ ಕಳಿಸಿದ್ದರು ಎನ್ನಲಾಗ್ತಿದೆ.
ತುಮಕೂರು ಜಿಲ್ಲಾಧಿಕಾರಿ ಮಧ್ಯಪ್ರವೇಶ: ಬಗೆಹರಿದ ಬಾಡಿಗೆದಾರರ ಸಮಸ್ಯೆ ಇದರಿಂದಾಗಿ ರಾತ್ರಿ ವೇಳೆ ಬೀದಿಯಲ್ಲೇ ನೂರಕ್ಕೂ ಹೆಚ್ಚು ಜನರು ಕಾಲ ಕಳೆದು, ಸ್ವಲ್ಪ ಸಮಯದ ನಂತರ ಅಕ್ಕ-ಪಕ್ಕದ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಶುಕ್ರವಾರ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಾಡಿಗೆದಾರರು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.
ಶನಿವಾರ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿದ ಜಿಲ್ಲಾಧಿಕಾರಿ ಕೆಲವು ಷರತ್ತುಗಳ ಮೇಲೆ ಸಾಲ ಮರುಪಾವತಿ ಮಾಡಿಸುವುದಾಗಿ ಮಂಜುನಾಥ್ನನ್ನು ಒಪ್ಪಿಸಿದ್ದರು. ಇದಾದ ನಂತರ ಬ್ಯಾಂಕ್ ಮತ್ತು ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನೆಯ ಬಾಗಿಲುಗಳನ್ನು ತೆರೆದು ಬಾಡಿಗೆದಾರರಿಗೆ ಮನೆಯೊಳಗೆ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:ಸಾಲ ಹಿಂದಿರುಗಿಸಲು ವಿಫಲನಾದ ಕಟ್ಟಡ ಮಾಲೀಕ.. ಬೀದಿಗೆ ಬಿದ್ದ 32ಕ್ಕೂ ಹೆಚ್ಚು ಬಾಡಿಗೆದಾರರು!