ತುಮಕೂರು: ಅಧ್ಯಯನದ ಉದ್ದೇಶದಿಂದ ತರಿಸಿಕೊಳ್ಳಲಾದ ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಹಾರ ಹಾಕಿ ವಿಶೇಷವಾಗಿ ಬರಮಾಡಿಕೊಂಡ ಘಟನೆ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಬೆಳಗಾವಿ ಹಾರೋಗೇರಿ ಪಟ್ಟಣದಿಂದ ತರಿಸಿಕೊಳ್ಳಲಾದ ವ್ಯಕ್ತಿಯೊಬ್ಬರ ಮೃತದೇಹಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು.
ಮೃತದೇಹಕ್ಕೆ ವಿದ್ಯಾರ್ಥಿಗಳಿಂದ ಪೂಜೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ (76) ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಶ್ರೀದೇವಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಮನವಿಯಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಮುಖಾಂತರ ಪಾಟೀಲರ ಮೃತದೇಹವನ್ನು ತರಿಸಿಕೊಳ್ಳಲಾಯಿತು.
ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ ಮೃತದೇಹ ಕಾಲೇಜು ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಧನ್ವಂತರಿ ಧ್ಯಾನದೊಂದಿಗೆ ಪೂಜೆ ಸಲ್ಲಿಸಿದ್ರು. ಪಾರ್ಥಿವ ಶರೀರಕ್ಕೆ ಕೈ ಮುಗಿದು, ನಮನ ಸಲ್ಲಿಸಿದ ಬಳಿಕ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ಸಾಗಿಸಲಾಯ್ತು.
ಮೃತಪಟ್ಟ ನಂತರ ತನ್ನ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡಬೇಕೆಂಬ ಇಂಗಿತವನ್ನು ಹಣಮಂತ ಸಿದ್ದಪ್ಪ ಬಿರಾದಾರ್ ಪಾಟೀಲ್ ಅವರು ಬದುಕಿದ್ದಾಗಲೇ ವ್ಯಕ್ತಪಡಿಸಿದ್ದರು ಎಂದು ಡಾ. ರಾಮಣ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮಹಾಂತೇಶ್ ರಾಮಣ್ಣ ಈಟಿವಿ ಭಾರತ್ಗೆ ತಿಳಿಸಿದರು.