ತುಮಕೂರು: ಜಿಲ್ಲೆಯಲ್ಲಿ ಚಿರತೆ ಹಾವಳಿ ನಿಯಂತ್ರಣಕ್ಕೆ ಬಳಕೆ ಮಾಡಲಾಗಿದ್ದ ಸ್ಪೆಷಲ್ ಟೈಗರ್ ಫೋರ್ಸ್ ಕಾರ್ಯಾಚರಣೆ ಪ್ರಯೋಜನಕ್ಕೆ ಬಾರದಂತಾಗಿದ್ದು, ಅರಣ್ಯ ಇಲಾಖೆ ಇರಿಸಿರುವ ಬೋನಿಗೆ ಬೀಳುತ್ತಿರುವ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ.
ಚಿರತೆ ಸೆರೆ ಹಿಡಿಯುವಲ್ಲಿ ಸ್ಪೆಷಲ್ ಟೈಗರ್ ಫೋರ್ಸ್ ಕಾರ್ಯಾಚರಣೆ ವಿಫಲ! ಈ ಹಿಂದೆ ಚಿರತೆ ಸೆರೆಹಿಡಿಯಲು ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ, ದೊಡ್ಡಮಳವಾಡಿ, ಚಿಕ್ಕಮಳವಾಡಿ, ಸಿಎಎಸ್ ಪುರ, ಹೆಬ್ಬೂರು ಸುತ್ತಮುತ್ತಲ ಪೊದೆಗಳು ಮತ್ತು ಮೀಸಲು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆದಿತ್ತು. ಇದಕ್ಕಾಗಿ ಬನ್ನೆರುಘಟ್ಟ, ಬಂಡಿಪುರ, ನಾಗರಹೊಳೆಯಿಂದ ಬಂದಿದ್ದ ವಿಶೇಷ ಅರಣ್ಯ ಪಡೆ ಕೂಂಬಿಂಗ್ ಆರಂಭಿಸಿತ್ತು.
ಇದರ ಜೊತೆಗೆ ಸ್ಪೆಷಲ್ ಟೈಗರ್ ಫೋರ್ಸ್ನಿಂದ ಕಾರ್ಯಾಚರಣೆ ನಡೆದಿತ್ತು. 60ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೂ ಕೂಡ ಚಿರತೆಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಸ್ಪೆಷಲ್ ಟೈಗರ್ ಫೋರ್ಸ್ ಸಿಬ್ಬಂದಿ ವಾಪಾಸ್ ತೆರಳಿದ್ದರು.
ಇದನ್ನೂ ಓದಿ:ಮೊದಲ ಹೆಂಡತಿಗೆ ತಲಾಖ್ ನೀಡಿ, 3ನೇ ಹೆಂಡತಿಗಾಗಿ 2ನೇ ಪತ್ನಿಯ ಕೊಂದ!
ನಾಲ್ಕು ಚಿರತೆಗಳು ಸಿ.ಎಸ್.ಪುರ ಸುತ್ತಮುತ್ತ ಓಡಾಡುತ್ತಿವೆ ಎಂದು ಅಂದಾಜಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿ.ಎಸ್.ಪುರ ಹೋಬಳಿಯ ಸುತ್ತಮುತ್ತ 20 ಬೋನುಗಳನ್ನು ಇರಿಸಿದ್ದರು. ಇದೀಗ ಒಂದಾದ ಮೇಲೊಂದರಂತೆ ಚಿರತೆಗಳು ಬೋನಿಗೆ ಬೀಳುತ್ತಿವೆ.