ಕರ್ನಾಟಕ

karnataka

ETV Bharat / city

5 ತಿಂಗಳ ಗರ್ಭಿಣಿಯಾದ್ರೂ ಜನ ಸೇವೆಗೆ ನಿಂತ ತಹಶೀಲ್ದಾರ್​.. ಧನ್ಯವಾದಗಳು ಮೇಡಂ - ತುಮಕೂರು ಲಾಕ್​ಡೌನ್​

ಕೋವಿಡ್​ ವಿರುದ್ದ ಟೊಂಕ ಕಟ್ಟಿನಿಂತಿರುವ ಪೊಲೀಸರು ಮತ್ತು ವೈದ್ಯರು ಹಗಲಿರುಳು ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ ಜನ ಸೇವೆಗೆ ನಿಂತಿದ್ದಾರೆ. ಈ ಪೈಕಿ 5 ತಿಂಗಳ ಗರ್ಭಿಣಿಯಾಗಿರುವ ಸಿರಾ ತಾಲೂಕಿನ ತಹಶೀಲ್ದಾರ್ ನಹೀದ್​ ಝಮ್​ ಅವರು ಜನ ಸೇವೆಗೆ ತಮ್ಮನ್ನ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಈ ಕುರಿತು ಈಟಿವಿ ಜೊತೆ ಮಾತನಾಡಿರುವ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

sira-taluk-tahasildar-working-even-in-pregnant-situation
ತಹಶೀಲ್ದಾರ್ ನಹೀದ್​ ಝಮ್

By

Published : Apr 20, 2020, 1:07 PM IST

ತುಮಕೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ನಿಂತು ಜಯದ ಹಾದಿ ನೋಡುತ್ತಿರುವ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತಮ್ಮ ಪರಿಸ್ಥಿತಿಯನ್ನ ಬದಿಗೊತ್ತಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತೆಯೇ ಗರ್ಭಿಣಿಯಾಗಿರುವ ಕೆಎಎಸ್​ ಅಧಿಕಾರಿಯೊಬ್ಬರು ಜನ ಸೇವೆಗೆ ನಿಂತಿರುವುದು ಶ್ಲಾಘನೀಯ ವಿಚಾರ.

ಜಿಲ್ಲೆಯ ಸಿರಾ ಪಟ್ಟಣದ ತಹಶೀಲ್ದಾರ ನಹೀದ್​ ಝಮ್​ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರೂ ಕೂಡಾ ಕರ್ತವ್ಯ ನಿಷ್ಠೆಯಿಂದ ಜನ ಸೇವೆಗೆ ನಿಂತಿದ್ದಾರೆ. ಈಗಾಗಲೇ ಸಿರಾ ಪಟ್ಟಣದಲ್ಲಿ 2 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಮುಂಜಾಗೃತ ಕ್ರಮವಾಗಿ ತಾವೇ ಖುದ್ದುನಿಂತು ಕಾರ್ಯ ವೈಖರಿಯನ್ನು ನೋಡುತ್ತಿದ್ದಾರೆ.

ಈಗಾಗಲೇ 32 ಜನರನ್ನು ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದು, ನಿತ್ಯ ಅವರಿರುವಂತಹ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೊಹತುರ್ ಅವರು ಸದ್ಯ ಸಿರಾ ಪಟ್ಟಣಕ್ಕೆ ಬಂದು ಜೊತೆಯಲ್ಲಿ ಉಳಿದುಕೊಂಡಿದ್ದಾರೆ.

ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ನಹೀದ ಝಮ್, ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವೆ ಮಾಡುವ ಅವಕಾಶ ಜೀವನದಲ್ಲಿ ಸಿಗುವುದಿಲ್ಲ. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ತೊಡಗಿರುವುದು ನನಗೆ ಸಂತೋಷ ತಂದಿದೆ. ಹೊಸ ಹೊಸ ಚಾಲೆಂಜ್​​ಗಳನ್ನು ಎದುರಿಸುತ್ತಿದ್ದೇನೆ. ಪ್ರತಿದಿನ ಸರ್ಕಾರದ ಪ್ರೋಟೋಕಾಲ್ ಗಳನ್ನು ಪಾಲನೆ ಮಾಡುವುದು ವಿಭಿನ್ನವಾಗಿದೆ. ಮನೆಯಲ್ಲಿ ತಮ್ಮ ಪತಿ ಜೊತೆಯಲ್ಲಿದ್ದು ಆತ್ಮಸ್ಥೈರ್ಯವನ್ನು ತುಂಬುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details