ತುಮಕೂರು:ಪಾಕ್ ಪರ ಘೋಷಣೆಗಳನ್ನು ಕೂಗುವ ದೇಶ ವಿರೋಧಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಟೌನ್ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಅಮೂಲ್ಯ ಎಂಬ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಕೆ ನೀಡಲು ಪ್ರಚೋದನೆ ನೀಡಿರುವ, ಆಕೆಯ ಹಿಂದಿರುವ ಶಕ್ತಿಗಳನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ಸಿಎಎ ವಿರೋಧಿಸಿ ಜರುಗಿದ ಕಾರ್ಯಕ್ರಮದಲ್ಲಿ ಅಮೂಲ್ಯ ಎಂಬ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶಕ್ಕೆ ಅಪಮಾನ ಮಾಡಿದ್ದಾಳೆ. ಆಕೆ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಆದರೆ, ಅದು ಶುದ್ಧ ಸುಳ್ಳು. ಈ ಕುರಿತು ತನಿಖೆ ನಡೆಯಬೇಕು ಎಂದರು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಈ ವಿದ್ಯಾರ್ಥಿನಿ ಯಾವುದೇ ಕಾರ್ಯಕ್ರಮಗಳಿಗೆ ಹೋಗಿ ಮಾತನಾಡಬೇಕಾದರೆ ಈ ರೀತಿಯಲ್ಲಿ ಮಾತನಾಡಬೇಕು ಎಂದು ಬರೆದು ಕೊಡುವವರಿದ್ದಾರೆ. ನನ್ನ ಹಿಂದೆ ವಿಚಾರವಂತರಿದ್ದಾರೆ ಎಂದು ಹೇಳಿಕೊಂಡಿದ್ದಾಳೆ ಎಂಬ ವಿಡಿಯೋ ಸಹ ವೈರಲ್ ಆಗಿದೆ. ಸಿಎಎ ವಿರೋಧಿ ವೇದಿಕೆಯಲ್ಲಿ ದೇಶದ್ರೋಹಿಗಳು, ಮತಾಂದರು, ಹಿಂದೂ ವಿರೋಧಿಗಳು ಸೇರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.