ತುಮಕೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಈಗಾಗಲೇ ನಿರಂತರ ಪಾದಯಾತ್ರೆ, ಹೋರಾಟ ನಡೆಸಲಾಗಿದೆ. ವಿಧಾನಸಭೆಯಲ್ಲಿ ಪ್ರಸ್ತಾಪವಾದ ನಂತರ ಸೆಪ್ಟೆಂಬರ್ 15ರೊಳಗೆ ನೆರವೇರಿಸಲಾಗುವುದು ಎಂದು ಸರ್ಕಾರ ಮಾತು ಕೊಟ್ಟಿತ್ತು. ಆದರೆ ಈವರೆಗೂ ಅದು ಜಾರಿಗೆ ಬಂದಿಲ್ಲ. ಹೀಗಾಗಿ ಸರ್ಕಾರದ ಮಾತನ್ನು ನೆನಪಿಸಲು ಮತ್ತು ಸರ್ಕಾರವನ್ನು ಎಚ್ಚರಗೊಳಿಸಲು ಆಗಸ್ಟ್ 26ರಿಂದ ಪ್ರತಿಜ್ಞಾ ಪಂಚಾಯತ್ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿ ಶ್ರೀ ಸಿದ್ದಲಿಂಗಸ್ವಾಮಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ನಂತರ ಮಾತನಾಡಿದರು. ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಚರ್ಚೆ ನಡೆಸಲಾಗಿದೆ. ಹೋರಾಟಕ್ಕೆ ಚೈತನ್ಯ ತುಂಬಲಾಗುತ್ತಿದೆ ಎಂದರು.