ತುಮಕೂರು: ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಉದ್ದೇಶವಾಗಿದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಗೆ ಒಳಪಡಿಸಿದರೆ ಆ ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆರೆ ಸಂರಕ್ಷಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಕೆರೆಗಳ ಸರ್ವೆ ಕಾರ್ಯ ಮಾಡಿಸಿ, ನಿರ್ವಹಣೆ ಮಾಡಬೇಕು. ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಅಭಿವೃದ್ಧಿಗೆ 2 ಕೋಟಿ ಮಾತ್ರ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗಾಗಿ ಈ ಅನುದಾನ ಸಾಕಾಗುವುದಿಲ್ಲ ಎಂದರು.
ಕೆರೆಗಳಲ್ಲಿನ ಹೂಳು ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಹೂಳನ್ನು ತುಂಬಿಕೊಂಡು ಹೋಗಬಹುದು. ಹೂಳು ತುಂಬಿರುವ ಕೆರೆ ಹಾಗೂ ಅರ್ಧ
ಹೂಳು ಇರುವ ಕೆರೆಗಳ ಕುರಿತು ಹಾಗೂ ಕೆರೆಗಳ ಜಲಾನಯನ ಪ್ರದೇಶದ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಗಳ ಬಂಡು(ಏರಿ)ಗಳಲ್ಲಿನ ಗಿಡಗಳನ್ನು ತೆರವುಗೊಳಿಸುವಾಗ ಏರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಯಂತ್ರಗಳನ್ನು ಬಳಸಬಾರದು. ಕೆರೆಯ ರಚನೆಗೆ ಧಕ್ಕೆಯಾಗದಂತೆ ಕೆರೆ ಏರಿಗಳನ್ನು ಸ್ವಚ್ಛಗೊಳಿಸಬೇಕು ಎಂದು ನಿರ್ದೇಶಿಸಿದರು.
ಓದಿ:ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ತಮಿಳುನಾಡಿನಲ್ಲಿ ಸೆರೆ
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ನಗರದ ಸುತ್ತಮುತ್ತಲಿನ ಕೆರೆಗಳಲ್ಲಿನ ಬಫರ್ ಝೋನ್ಗಳಲ್ಲಿ ಮನೆ ಕಟ್ಟಿದ್ದಾರೆ. ಅವರಿಗೆ ರಿಯಾಯಿತಿ
ಕಲ್ಪಿಸಬಹುದೇ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾನುಸಾರ ಸಾಧ್ಯವಿಲ್ಲ. ಹಸಿರು ನ್ಯಾಯ ಪೀಠದ ನಿರ್ದೇಶನದಂತೆ ಕೆರೆಗಳ ರಕ್ಷಣೆಗಾಗಿ ಬಫರ್ ಝೋನ್ ಬಿಡಬೇಕು. ಹಳೆ ನಿಜಗಲ್ ಕೆರೆಯಿಂದ ತುಮಕೂರು ಗ್ರಾಮಾಂತರದ 12 ಕೆರೆಗಳಿಗೆ ಟ್ರಿಟೇಡ್ ವಾಟರ್ ಹರಿಸಲು ಯೋಜನೆ ರೂಪಿಸಿ, ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.