ತುಮಕೂರು: ಕೊರೊನಾದ ಈ ಪರಿಸ್ಥಿತಿಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾವ ವಾಹನಗಳ ಚಾಲಕರು ಮುಂದೆ ಬರುತ್ತಿಲ್ಲ. ಇದು ಜಿಲ್ಲಾಡಳಿತಕ್ಕೆ ಭಾರಿ ತಲೆನೋವು ಉಂಟು ಮಾಡಿತ್ತು. ಆದರೆ, ಈಗ ಸೋಂಕಿತರು ನಿಟ್ಟುಸಿರು ಬಿಡುವಂತಾಗಿದೆ.
ಖಾಸಗಿಯಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ತಮ್ಮ ವಿದ್ಯಾಸಂಸ್ಥೆಯ 2 ಮಿನಿ ಬಸ್ಗಳನ್ನೇ ಸೋಂಕಿತರಿಗೆ ಸಹಕಾರಿ ಆಗಲೆಂದು ನೀಡಿದ್ದಾರೆ. ‘ಜನಸೇವಾ ರಥ’ ಎಂಬ ಹೆಸರಿನಲ್ಲಿ ಎರಡು ಬಸ್ ಗಳನ್ನು ನೀಡಲಾಗಿದೆ.
ಮುಖ್ಯವಾಗಿ ಬಡ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗಲು ಆಟೋಗಳು ಸೇರಿದಂತೆ ಇನ್ನಿತರ ವಾಹನಗಳು ಲಭ್ಯವಾಗುತ್ತಿರಲಿಲ್ಲ. ಇದು ಬಡ ಸೋಂಕಿತರಿಗೆ ದಿಕ್ಕೇ ಕಾಣದ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದನ್ನು ಮನಗಂಡು ಶಾಸಕ ಜ್ಯೋತಿ ಗಣೇಶ್ ಎರಡು ಬಸ್ಗಳನ್ನು ಸೋಂಕಿತರ ಓಡಾಟಕ್ಕೆ ನೀಡಿದ್ದಾರೆ.
ಕೊರೊನಾ ಪೀಡಿತರ ಓಡಾಟಕ್ಕೆ 2 ಮಿನಿ ಬಸ್ ನೀಡಿದ ಶಾಸಕ ಅಷ್ಟೇ ಅಲ್ಲದೆ, ಇನ್ನೊಂದೆಡೆ ದೂರದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ವ್ಯವಸ್ಥಿತ ಆಂಬ್ಯುಲೆನ್ಸ್ ಸೌಲಭ್ಯ ಪಡೆಯಲು ಸಾಧ್ಯವಾಗದೇ ರೋಗಿಗಳು ನೋವು ಅನುಭವಿಸುತ್ತಿದ್ದಾರೆ. ಅಂತಹ ಸೋಂಕಿತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಖಾಸಗಿಯವರು ಉಚಿತವಾಗಿ ಆಂಬ್ಯುಲೆನ್ಸ್ ವ್ಯವಸ್ತೆ ಮಾಡಿದ್ದಾರೆ.
ಸೋಂಕಿತರನ್ನು ಕಾರು ಮತ್ತು ಆಟೋಗಳಲ್ಲಿ ಬಾಡಿಗೆಗೆ ಕರೆದುಕೊಂಡು ಹೋಗಲು ಮುಂದಾದರೆ, ಚಾಲಕರು ಪಿಪಿಇ ಕಿಟ್ ಧರಿಸಬೇಕು ಮತ್ತು ಹೆಚ್ಚು ಕಾಳಜಿ ವಹಿಸಬೇಕಿದೆ. ಇದಕ್ಕೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಲು ಇವರು ಹಿಂಜರಿಯುತ್ತಿದ್ದರು.