ತುಮಕೂರು :ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆರಗ ಜ್ಞಾನೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಅವರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬೇರೆ ಜಿಲ್ಲೆಯವರನ್ನು ಸರ್ಕಾರ ನೇಮಕ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ಹೇಳಿದ್ದಾರೆ.
ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಯಾವ ಮಾನದಂಡವನ್ನು ಅನುಸರಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೋ ಅವರಿಗೇ ಗೊತ್ತಿಲ್ಲ. ಗೃಹ ಸಚಿವರಿಗೆ ಹೇಮಾವತಿ ನದಿ ನೀರನ್ನು ತುಮಕೂರು ಜಿಲ್ಲೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಮಾಹಿತಿ ಇದೆಯಾ?. ಇದರಿಂದ ಅಧಿಕಾರಿಗಳದ್ದೇ ಕೈಮೇಲಾಗುತ್ತದೆ. ಮುಖ್ಯಮಂತ್ರಿಗಳ ಈ ರೀತಿಯ ನಿರ್ಣಯ ಸರಿಯಲ್ಲ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಆಪರೇಷನ್ ಬಿಜೆಪಿ, ಆಪರೇಷನ್ ಹಸ್ತಕ್ಕೆ ನಾನು ಒಳಗಾಗಿದ್ದರೆ ತುಮಕೂರು ಜಿಲ್ಲೆಯಲ್ಲಿ ನಾನೇ ಸಚಿವನಾಗಿ ಇರುತ್ತಿದ್ದೆ. ಆದರೆ, ಜೆಡಿಎಸ್ ಪಕ್ಷದಿಂದ ನನ್ನನ್ನು ಹೊರಗೆ ಹಾಕಿದ್ದರಿಂದ ವಿಧಿಯಿಲ್ಲದೇ ಬೇರೆ ದಾರಿ ನೋಡಿಕೊಳ್ಳಬೇಕಾಗಿದೆ. ಇದು ನಮ್ಮ ಪಕ್ಷದವರಿಗೂ ಗೊತ್ತು ಎಂದು ಹೇಳಿದರು.