ತುಮಕೂರು: ಮದಲೂರು ಕೆರೆಗೆ ನೀರು ಹರಿಸುವ ವಿಚಾರವಾಗಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರೇ ಹೇಮಾವತಿ ನೀರು ಹಂಚಿಕೆ ಇಲ್ಲ ಎಂಬ ಹೇಳಿಕೆ ನೀಡಿದ್ದು, ಶಿರಾ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಪರಿಣಾಮ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಬಳಿ ತೆರಳಿ ಅಳಲು ತೋಡಿಕೊಳ್ಳುವಂತಾಗಿದೆ.
ಶಿರಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದನ್ನೇ ಪ್ರಮುಖ ವಿಷಯವನ್ನಾಗಿಸಿ ಉಪಚುನಾವಣೆಯಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಗೆಲುವು ಸಾಧಿಸಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿಕೆಯಿಂದ ವಿಚಲಿತರಾಗಿರೋ ಶಾಸಕ ಡಾ. ರಾಜೇಶ್ ಗೌಡ, ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಬಳಿ ತೆರಳಿ ಹೇಮಾವತಿ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಡಾ. ರಾಜೇಶ್ ಗೌಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಶಾಸಕ ಡಾ. ರಾಜೇಶ್ ಗೌಡ ಭಾರಿ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಸಚಿವರು ಮಾತ್ರ ತಾಂತ್ರಿಕ ತೊಂದರೆಯಿದೆ ಎಂದು ಹೇಳುತ್ತಿದ್ದಾರೆ. ಸಚಿವ ಮಾಧುಸ್ವಾಮಿ ಜೊತೆ ಹೇಮಾವತಿ ನೀರು ಹರಿಸುವ ಕುರಿತಂತೆ ಮಾತುಕತೆ ನಡೆಸುವುದಾಗಿ ಬಿಎಸ್ವೈ ಭರವಸೆ ನೀಡಿದ್ದಾರೆ. ಮಾಧುಸ್ವಾಮಿ ಹೇಮಾವತಿ ನೀರು ಬಿಡಲು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಿದ್ದಾರೆ ಶಿರಾ ಶಾಸಕ ಡಾ. ರಾಜೇಶ್ ಗೌಡ.
ಇದನ್ನೂ ಓದಿ:ಚರ್ಚೆಗೆ ಗ್ರಾಸವಾದ ಮದಲೂರು ಕೆರೆ: ಹೇಮಾವತಿ ನೀರು ಹರಿಸದಿದ್ರೆ ಹೋರಾಟ-ಶಾಸಕ ಡಾ.ರಾಜೇಶ್ ಗೌಡ
ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಅದಕ್ಕೆ ಪರಿಹಾರವಿರುತ್ತದೆ. ಮಾಧುಸ್ವಾಮಿ ಅದನ್ನು ನಿಭಾಯಿಸುತ್ತಾರೆ. ಮದಲೂರು ಕೆರೆ ಸಣ್ಣ ಕೆರೆಯಾಗಿದ್ದು, ಅದಕ್ಕೆ ಹೇಮಾವತಿ ನೀರು ಹರಿಸುವುದರಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ಶಾಸಕರ ಮಾತು.