ತುಮಕೂರು: ತುಮಕೂರು: ಕಳೆದ ವಾರ ಕಾಣೆಯಾಗಿದ್ದ 'ರುಸ್ತುಮಾ' ಹೆಸರಿನ ಮುದ್ದಿನ ಗಿಳಿ ತುಮಕೂರಿನ ಬಂಡೆಪಾಳ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗಿಳಿ ಹುಡುಕಿ ಕೊಟ್ಟವರಿಗೆ ಮಾಲೀಕ ಅರ್ಜುನ್ ಅವರು ಬರೋಬ್ಬರಿ 85 ಸಾವಿರ ರೂಪಾಯಿ ಬಹುಮಾನ ನೀಡುವ ಮೂಲಕ ತಾವು ಘೋಷಿಸಿದಂತೆ ನಡೆದುಕೊಂಡಿದ್ದಾರೆ. ಅಲ್ಲದೆ, ಗಿಳಿಯ ಮೇಲೆ ಅವರಿಗಿರುವ ಪ್ರೀತಿ, ಕಾಳಜಿ ಎಂತಹದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಳೆದ ಶನಿವಾರ(ಜುಲೈ 16) ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಎಂಬುವರ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ಮುದ್ದಿನ ಗಿಳಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ ತಾವು ಸಹ ಗಿಳಿಗಾಗಿ ಹುಡುಕಾಟ ನಡೆಸಿದ್ದರು.
ಗಿಳಿ ಸಿಕ್ಕಿದ್ದು ಹೀಗೆ:ತುಮಕೂರಿನ ಬಂಡೆಪಾಳ್ಯ ಗ್ರಾಮದ ಶ್ರೀನಿವಾಸ್ ಎಂಬುವರು ತಮ್ಮ ಮನೆ ಮುಂದೆ ಕೂತಿದ್ದ ಈ ಅಪರೂಪದ ಗಿಳಿಯನ್ನು ಸಂರಕ್ಷಿಸಿಟ್ಟಿದ್ದರು. ಬಳಿಕ ಗಿಳಿಯೊಂದು ಕಾಣೆಯಾದ ಸುದ್ದಿ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದೆ. ಗಿಳಿಯ ಮಾಲೀಕ ಈ ಬಗ್ಗೆ ಪ್ರಚಾರ ಮಾಡಿದ್ದಲ್ಲದೆ, ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದ್ದರ ಕುರಿತು ಅಕ್ಕಪಕ್ಕದ ಮನೆಯವರು ಶ್ರೀನಿವಾಸ್ಗೆ ತಿಳಿಸಿದ್ದಾರೆ. ನಂತರ ಅವರು ಅರ್ಜುನ್ ಮೊಬೈಲ್ ನಂಬರ್ಗೆ ಕರೆ ಮಾಡಿ ಸಂಪರ್ಕಿಸಿ ಗಿಣಿಯನ್ನು ವಾಪಸ್ ಕೊಟ್ಟಿದ್ದಾರೆ.