ತುಮಕೂರು:ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಸ್ತ್ರೀಯರು ಮತ್ತು ಬಾಲಕಿಯರ ಸಂಖ್ಯೆಯೇ ಗಣನೀಯವಾಗಿದೆ. ಅದರಲ್ಲೂ ಪ್ರೇಮ ಪ್ರಕರಣಗಳಿಗೆ ಸಿಲುಕುವ ಯುವತಿಯರು ಕಣ್ಮರೆಯಾಗುತ್ತಿದ್ದಾರೆ.
ಆಧುನಿಕ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆ ಹೆಚ್ಚುತ್ತಿದ್ದಂತೆ, ಪ್ರೀತಿ - ಪ್ರೇಮ ವಿಚಾರಗಳಲ್ಲಿ ಯುವತಿಯರು ಮೈಮರೆಯುತ್ತಿದ್ದಾರೆ. ಪ್ರೀತಿಯ ಬಲೆಗೆ ಬಿದ್ದು ಯುವತಿಯರು ಮನೆಯನ್ನೆ ತೊರೆಯುತ್ತಿದ್ದಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಒಟ್ಟು 3,065 ನಾಪತ್ತೆ ಪ್ರಕರಣಗಳು ದಾಖಲಾಗಿದೆ. ಅವರಲ್ಲಿ 1,966 ಮಹಿಳೆಯರು ಮತ್ತು 312 ಬಾಲಕಿಯರು ಸೇರಿದ್ದಾರೆ. ಇದಕ್ಕೆ ಪೂರಕವಾಗಿ 2021ರಲ್ಲಿ 541 ಮಹಿಳೆಯರು, 72 ಬಾಲಕಿಯರು ಕಾಣೆಯಾಗಿರುವುದು ಆತಂಕಕಾರಿಯಾಗಿದೆ.
ಓದಿ:ಕಾಂಗ್ರೆಸ್ ಸೇರ್ಪಡೆಯಾದ ನಿರ್ದೇಶಕ ಎಸ್.ನಾರಾಯಣ್: ಪಕ್ಷ ಸೇರ್ಪಡೆ ಬಗ್ಗೆ ಹೇಳಿದ್ದಿಷ್ಟು
ಅಲ್ಲದೆ 703 ಮಂದಿ ಪುರುಷರು ಕೂಡ ಕಳೆದ 5 ವರ್ಷದ ಅವಧಿಯಲ್ಲಿ ನಾಪತ್ತೆಯಾಗಿದ್ದಾರೆ. 84 ಬಾಲಕರು ಸೇರಿದ್ದಾರೆ. ಇನ್ನು ಮನೆಯಿಂದ ಓಡಿ ಹೋಗುವ ಮಕ್ಕಳು ತಂದ ಹಣ ಖಾಲಿಯಾದ ಬಳಿಕ ವಾಪಸ್ ಮನೆಗೆ ಬರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಒಟ್ಟಾರೆ ವಿವಿಧ ಕಾರಣಗಳಿಂದ ಮನೆಬಿಟ್ಟು ಹೋಗುವವರ ಮಹಿಳೆಯರ ಸಂಖ್ಯೆಯೇ ಹೆಚ್ಚುತ್ತಿರುವುದು ಗಮನಾರ್ಹ ಅಂಶವಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್, ಉನ್ನತ ತಂತ್ರಜ್ಞಾನವನ್ನು ಬಳಸಿ ಕಾಣೆಯಾದವರ ಮೊಬೈಲ್ ಟ್ರಾಕಿಂಗ್ನಿಂದ ಪತ್ತೆ ಮಾಡುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ಹೀಗಾಗಿ ಪೋಷಕರು ಮಕ್ಕಳು ಕಾಣೆಯಾದ ತಕ್ಷಣ ದೂರು ನೀಡಿದರೆ ಅವರನ್ನು ಶೀಘ್ರ ಪತ್ತೆ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.