ತುಮಕೂರು: ಇಂದು ಬೆಳಗ್ಗೆ ತುಮಕೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಸಂಸದ ಬಸವರಾಜು ಅವರು ಸಚಿವ ಭೈರತಿ ಬಸವರಾಜ್ ಬಳಿ ನಡೆಸಿದ ಗುಸು ಗುಸು ಮಾತು ಸಚಿವ ಮಾಧುಸ್ವಾಮಿಗೆ ಬೇಸರ ತರಿಸಿದೆ. ತಮ್ಮ ವಿರುದ್ಧ ಗುಸುಗುಸು ಮಾತನಾಡಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ.
ಮಾಧ್ಯಮಗೋಷ್ಟಿಯ ನಂತರ ಮಹಾನಗರ ಪಾಲಿಕೆ ಆವರಣದಲ್ಲಿ ನಿರ್ಮಿಸಿರುವ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಪುನರ್‌ವಸತಿ ಯೋಜನೆಯಡಿ ಮಾರಿಯಮ್ಮ ನಗರದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣ ಉದ್ಘಾಟನೆ, ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಿರ್ಮಿಸಿರುವ ನೂತನ ಸಭಾಂಗಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಮಾಧುಸ್ವಾಮಿ ಕೂಡ ಭಾಗವಹಿಸಿದ್ದರು. ಇಬ್ಬರು ಮಾತನಾಡಿದ ವಿಡಿಯೋ ವೈರಲ್ ವಿಷಯ ತಿಳಿಯುತ್ತಿದ್ದಂತೆ ಸಚಿವ ಮಾಧುಸ್ವಾಮಿ ಕೆಂಡಾಮಂಡಲರಾಗಿ ಕಾರ್ಯಕ್ರಮದ ಮಧ್ಯದಲ್ಲಿಯೇ ವೇದಿಕೆಯಿಂದ ಇಳಿದು ಹೊರಟು ಹೋದರು.