ತುಮಕೂರು:ಸತತವಾಗಿ ಮೂರು ವರ್ಷಗಳಿಂದ ಕೊಠಡಿಯೊಂದರಲ್ಲಿ ಬಂಧಿಯಾಗಿದ್ದ ಮಾನಸಿಕ ಅಸ್ವಸ್ಥನನ್ನು ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಸಿದ್ದಲಿಂಗೇಗೌಡ ಅವರು ಜಿಲ್ಲಾಡಳಿತದ ನೆರವಿನೊಂದಿಗೆ ವಿಮುಕ್ತಿಗೊಳಿಸುವಲ್ಲಿ ಯಶಸ್ವಿಯಾದರು. ಈ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಯಲಗಲವಾಡಿ ಗ್ರಾಮದ ವೇದಮೂರ್ತಿ ಮತ್ತು ಗೌರಮ್ಮ ದಂಪತಿಯ ಮಗ ನವೀನ್ ಮೂರು ವರ್ಷದಿಂದ ಗ್ರಾಮದಲ್ಲಿ ಪಾಳುಬಿದ್ದಿದ್ದ ಕೊಠಡಿಯಲ್ಲಿ ಬಂಧಿಯಾಗಿದ್ದ. ದಾಯಾದಿಗಳು ಆಸ್ತಿ ಕಲಹದಿಂದ ಈತನಿಗೆ ಹುಚ್ಚನ ಪಟ್ಟ ಕಟ್ಟಿ ಮಾನಸಿಕ ಅಸ್ವಸ್ಥನಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ನವೀನ್ ಗ್ರಾಮದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಎಲ್ಲರ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ ಇದನ್ನು ಸ್ವತಃ ಆತನ ತಾಯಿ ಗೌರಮ್ಮ ತಮ್ಮ ಮನೆಯ ಪಾಳುಬಿದ್ದ ಕತ್ತಲೆಯ ಕೋಣೆಯಲ್ಲಿ ಮೂರು ವರ್ಷದಿಂದ ಕೂಡಿ ಹಾಕಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.