ತುಮಕೂರು:ಬಯಲು ಸೀಮೆಯ ನಾಡು, ಏಕಶಿಲಾ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮಧುಗಿರಿಯಲ್ಲೊಂದು ಅಪರೂಪದ ಜಲಧಾರೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಬಂಡೆ ಕಲ್ಲುಗಳಿಂದ ಕುರುಚಲು ಗಿಡ, ಮರಗಳಿಂದ ಕೂಡಿರುವ ಪ್ರಕೃತಿಯ ಸೊಬಗಿನ ಮಧ್ಯೆಯಿರುವ ಮಧುಗಿರಿ ಫಾಲ್ಸ್ ನೋಡಲು ಜನರು ದೂರದ ಊರುಗಳಿಂದ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಇತ್ತ ಮಧುಗಿರಿ ಪಟ್ಟಣದ ಸಮೀಪದಲ್ಲಿಯೇ ರಮಣೀಯವಾದ ಹಾಲ್ನೋರೆಯ ಜಲಧಾರೆಯೊಂದು ಪತ್ತೆಯಾಗಿದೆ.
ಸಾಮಾನ್ಯವಾಗಿ ಜುಳುಜುಳು ಹರಿಯುವ ಝರಿಗಳಿಂದ ಹಿಡಿದು ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು ಮಲೆನಾಡ ತಪ್ಪಲಿನಲ್ಲಿ ಕಾಣಸಿಗುತ್ತವೆ. ಆದರೆ ಇಂತಹದ್ದೇ ಅಪರೂಪದಲ್ಲಿ ಅಪರೂಪ ಎನ್ನುವಂತಹ ದೂದ್ ಫಾಲ್ಸ್ ನಂತೆ ಕಾಣುವ ಜಲಪಾತವೊಂದು ಮಧುಗಿರಿ-ತುಮಕೂರು ರಸ್ತೆಯಲ್ಲಿರುವ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ಬಳಿ ಪತ್ತೆಯಾಗಿದೆ.
ಕಮ್ಮನ ಕೋಟೆ ನಂತರ ಕೆ.ಸಿ.ರೊಪ್ಪಕ್ಕೆ ಹೋಗುವ ರಸ್ತೆಯಲ್ಲಿ 300 ಮೀಟರ್ ಗುಡ್ಡದ ರಸ್ತೆ ಹತ್ತಿ ಇಳಿದರೆ ಸುಂದರ ಜಲಧಾರೆಯೊಂದು ಕಣ್ಣಿಗೆ ಬೀಳುತ್ತದೆ. ಇಷ್ಟು ದಿನ ಜಲಧಾರೆಯ ತಾಣಗಳನ್ನು ಅರಸಿ ಇತರೆ ಭಾಗಗಳಿಗೆ ಹೋಗುತ್ತಿದ್ದ ಜನರು ಇಲ್ಲಿನ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿರುವ ಜಲಧಾರೆಯನ್ನು ಕಂಡು ಮೂಕ ವಿಸ್ಮಿತರಾಗಿದ್ದಾರೆ.