ಕರ್ನಾಟಕ

karnataka

By

Published : Aug 11, 2021, 7:42 AM IST

ETV Bharat / city

ಚರ್ಚೆಗೆ ಗ್ರಾಸವಾದ ಮದಲೂರು ಕೆರೆ: ಹೇಮಾವತಿ ನೀರು ಹರಿಸದಿದ್ರೆ ಹೋರಾಟ-ಶಾಸಕ ಡಾ.ರಾಜೇಶ್ ಗೌಡ

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಅವಕಾಶವಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳುತ್ತಿದ್ದರೆ, ಮತ್ತೊಂದೆಡೆ, ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯಿಸಿ, ಹೇಮಾವತಿ ನೀರು ಹರಿಸದಿದ್ರೆ ಹೋರಾಟ ಮಾಡಿ ಜೈಲು ಸೇರಲು ಸಿದ್ದ ಎನ್ನುತ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ಮದಲೂರು ಕೆರೆ ಚರ್ಚೆಗೆ ಗ್ರಾಸವಾಗಿದ್ದು, ಆರೋಪ-ಪ್ರತ್ಯಾರೋಪಕ್ಕೆ ವೇದಿಕೆ ಸೃಷ್ಟಿಸಿದೆ.

madalooru lake water dispute
ಮದಲೂರು ಕೆರೆ ವಿವಾದ

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಪ್ರಮುಖ ನೀರಿನ ಸೆಲೆಯಾಗಿರೋ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಒಂದೆಡೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಮದಲೂರು ಕೆರೆಗೆ ನೀರು ಹರಿಸಲು ಅವಕಾಶವಿಲ್ಲ ಎನ್ನುತ್ತಿದ್ದಾರೆ. ಆದರೆ, ಶಿರಾ ಶಾಸಕ ಡಾ.ರಾಜೇಶ್ ಗೌಡ ಮಾತ್ರ ಹೇಮಾವತಿ ನೀರು ಹರಿಸದಿದ್ದರೆ ಹೋರಾಟ ಮಾಡಿ ಜೈಲು ಸೇರಲು ಸಿದ್ದ ಎಂದು ಹೇಳುತ್ತಿದ್ದಾರೆ. ಇದ್ರಿಂದಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಮಾತಿನ ಚಕಮಕಿ ನಡೆಯುತ್ತಿದೆ.

ಮದಲೂರು ಕೆರೆ ವಿವಾದ - ಪ್ರತಿಕ್ರಿಯೆ

ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದ ಈ ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಶಿರಾ ಕ್ಷೇತ್ರ ಗೆದ್ದ ಬಳಿಕ ಬಿಜೆಪಿ ಮದಲೂರು ಕೆರೆಗೆ ನೀರು ಹರಿಸಿತ್ತು. ಆದರೆ ಈ ವರ್ಷ ಹೇಮಾವತಿ ನೀರು ಹರಿಸಲು ಕಾನೂನಿನ ತೊಡಕಿದೆ ಅಂತಾರೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ. ಕಾನೂನು ಉಲ್ಲಂಘಿಸಿ ನೀರು ಹರಿಸಿಕೊಂಡರೆ ಅಧಿಕಾರಿಗಳು, ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆ ಎಂದು ಸಚಿವ ಮಾಧುಸ್ವಾಮಿ ಗುಡುಗಿದ್ದಾರೆ.

ಕೆರೆಗೆ ನೀರು ತುಂಬಿಸುವ ವಾಗ್ದಾನ:

ಇದೇ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯ ರಾಜಕೀಯವನ್ನೇ ತಿರುಗಿ ನೋಡುವಂತೆ ಮಾಡಿದ್ದು ಮದಲೂರು ಕೆರೆ. ಅದಕ್ಕೆ ಪ್ರಮುಖ ಕಾರಣ ಎಂಬಂತೆ ಆಡಳಿತಾರೂಢ ಬಿಜೆಪಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿರಾ ಕ್ಷೇತ್ರದಲ್ಲಿ ಖಾತೆ ತೆರೆದಿದ್ದು, ಅದೇ ಮದಲೂರು ಕೆರೆಯ ನೀರಿನ ವಿಚಾರ ಚುನಾವಣೆಯ ಅಸ್ತ್ರವಾಗಿತ್ತು. ಮದಲೂರು ಕೆರೆಗೆ ಹೇಮಾವತಿ ನೀರು ತುಂಬಿಸುತ್ತೇವೆ ಎಂದು ವಾಗ್ದಾನ ಮಾಡಿದ್ದರು ಅಂದಿನ ಸಿಎಂ ಯಡಿಯೂರಪ್ಪ. ಶಿರಾ ಕ್ಷೇತ್ರ ಗೆದ್ದ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಕೆರೆಗೆ ನೀರು ಹರಿಸಲಾಗಿತ್ತು. ಆದರೆ ಕೆರೆ ಅರ್ಧದಷ್ಟು ತುಂಬಿತ್ತೇ ಹೊರತು ಸಂಪೂರ್ಣ ಭರ್ತಿಯಾಗಿರಲಿಲ್ಲ. ಇದರಿಂದ ಮದಲೂರು ಅಕ್ಕಪಕ್ಕದ ಜನರಿಗೆ ಅನುಕೂಲವಾಗಿತ್ತು.

ಆದರೆ ಈ ವರ್ಷ ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ತೊಡಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳುತ್ತಿದ್ದಾರೆ. ಮದಲೂರು ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲು ಅವಕಾಶವಿದೆ. ಆದರೆ ಹೇಮಾವತಿ ನೀರು ಹರಿಸಲು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀರು ಹರಿಸಿದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಜೈಲಿಗೆ ಹೋಗುತ್ತಾರೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಶುಲ್ಕ ಪಾವತಿ ವಿಳಂಬ: ಹೈಕೋರ್ಟ್​ನ ಕ್ಷಮೆಯಾಚಿಸಿದ ಎಸ್.ಆರ್ ಹಿರೇಮಠ್

ಕಳೆದ ಬಾರಿ ಚಿಕ್ಕನಾಯಕನಹಳ್ಳಿ ತಾಲೂಕಿನ ನೀರಿನ ಪಾಲನ್ನು ಮದಲೂರು ಕೆರೆಗೆ ಹರಿಸಲಾಗಿತ್ತು. ಈ ಬಾರಿಯೂ ಚಿಕ್ಕನಾಯಕನಹಳ್ಳಿ ಕೆರೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಆ ಕ್ಷೇತ್ರದ ಪಾಲಿನ ನೀರನ್ನು ಮದಲೂರು ಕೆರೆಗೆ ಹರಿಸುತ್ತೇವೆ ಎಂದಿದ್ದಾರೆ. ಜತೆಗೆ ಅವಧಿಗೂ ಮುನ್ನವೇ ಶಿರಾದ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿದಿದ್ದು ಉತ್ತಮ ಮಳೆಯಾಗಿದ್ದರಿಂದ ಕೆರೆ ತುಂಬಲು ಇನ್ನು ಹೆಚ್ಚಿಗೆ ನೀರು ಬೇಕಾಗಿಲ್ಲ. ಶಿರಾದ ಪಾಲಿನ 0.89 ಟಿಎಂಸಿ ನೀರು ಹೆಚ್ಚಿಗೆ ಉಳಿಯಲಿದ್ದು ಹೆಚ್ಚುವರಿ ಉಳಿದ ನೀರನ್ನು ಮದಲೂರು ಕೆರೆಗೆ ಹರಿಸಲಾಗುವುದು ಎಂದು ರಾಜೇಶ್ ಗೌಡ ವಾದ ಮುಂದಿಟ್ಟಿದ್ದಾರೆ.

ಅಲ್ಲದೇ ಈ ಬಾರಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸದಿದ್ದರೆ ಹೋರಾಟ ನಡೆಸುತ್ತೇವೆ. ಅಂತಹ ಸನ್ನಿವೇಶ ಬಂದರೆ ಜೈಲಿಗೆ ಹೋಗಲು ಕೂಡ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details