ತುಮಕೂರು:ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸುಮಾರು 40 ಅಡಿ ಆಳದ ಬಾವಿಗೆ ಬಿದ್ದಿರುವ ಘಟನೆ ಗುಬ್ಬಿ ತಾಲೂಕಿನ ಜೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಣ್ಣ ಎಂಬವರಿಗೆ ಸೇರಿದ ತೋಟದಲ್ಲಿ ಪಾಳುಬಿದ್ದ ಬಾವಿಯಲ್ಲಿ ಚಿರತೆ ಇರುವುದು ಗಮನಕ್ಕೆ ಬಂದಿದೆ. ನಿನ್ನೆ ರಾತ್ರಿಯೇ ಚಿರತೆ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಅಂದಾಜು ಎರಡು ವರ್ಷ ವಯಸ್ಸಿನ ಚಿರತೆ ಬಾವಿಗೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.
ಆಹಾರ ಅರಸಿ ಬಂದು ಪಾಳು ಬಾವಿಗೆ ಬಿದ್ದ ಚಿರತೆ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಿಂದ ಚಿರತೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುರುಚಲು ಗಿಡಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಚಿರತೆಗಳು ವಾಸಿಸುತ್ತವೆ. ಹೀಗಾಗಿ ಈ ಪ್ರದೇಶದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗ್ರಾಮಗಳಿಗೆ ನುಗ್ಗುವ ಚಿರತೆಗಳು ಬೀದಿನಾಯಿ, ಕುರಿ, ಮೇಕೆಗಳನ್ನು ತಿಂದು ಹಾಕುತ್ತವೆ. ಅದೇ ರೀತಿ ಆಹಾರ ಅರಸಿ ನಿನ್ನೆ ರಾತ್ರಿ ಚಿರತೆ ಗ್ರಾಮಕ್ಕೆ ಹೋಗಿರಬಹುದೆಂದು ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಶಿವಣ್ಣವರ ತೋಟದಲ್ಲಿರುವ ಪಾಳುಬಿದ್ದ ಬಾವಿಯಲ್ಲಿರುವ ಚಿರತೆಯ ರಕ್ಷಣೆಗೆ ಹಾಸನದಿಂದ ಅರಿವಳಿಕೆ ತಜ್ಞರಾದ ಮುರಳಿ ಮತ್ತು ಅವರ ತಂಡ ಬರುವಿಕೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ಇನ್ನೊಂದೆಡೆ ಚಿರತೆಯನ್ನು ನೋಡಲು ಸುತ್ತಮುತ್ತಲ ಜನರು ತಂಡೋಪತಂಡವಾಗಿ ಬರುತ್ತಿರುವುದು ಸಾಮಾನ್ಯವಾಗಿದೆ.