ಕರ್ನಾಟಕ

karnataka

ETV Bharat / city

ಯಾವುದೇ ರೀತಿಯ ಹಗರಣ ನಡೆದಿಲ್ಲ; ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಯು ನಿರೀಕ್ಷೆಗಿಂತ ವೇಗವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡು ಹಂತದಲ್ಲಿ ಜಿಲ್ಲೆಗೆ ಸುಮಾರು ಒಂದು ಸಾವಿರ ಕೋಟಿಯಷ್ಟು ಅನುದಾನವನ್ನು ನೀರಾವರಿಗಾಗಿ ಬಿಡುಗಡೆ ಮಾಡಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

JC Madhuswamy, Minister of Law and Parliamentary Affairs
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ

By

Published : Jul 27, 2020, 8:03 PM IST

ತುಮಕೂರು:ವೆಂಟಿಲೇಟರ್, ಪಿಪಿಇ ಕಿಟ್ ಖರೀದಿಯಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. 500-600 ಕೋಟಿಯಷ್ಟು ಹಣ ಖರ್ಚು ಆಗಿರಬಹುದು. ನೀವು ಹೇಗೆ 2,000 ಕೋಟಿ ರೂ. ಎಂದು ಆರೋಪ ಮಾಡುತ್ತಿದ್ದೀರಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಪಂ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜ್ಯಮಟ್ಟದ ವರ್ಚುಯಲ್ ಪ್ಲಾಟ್​​​ಫಾರ್ಮ್​​​​​​​ ಮೂಲಕ ನಡೆಸಿದ ಕಾರ್ಯಕ್ರಮ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ನೋಟಿಸ್ ನೀಡಿದರೂ ಅದಕ್ಕೆ ಸಮರ್ಥವಾಗಿ ಉತ್ತರಿಸುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ನಮ್ಮ ಮಂತ್ರಿಗಳು, ವೆಂಟಿಲೇಟರ್ ಮತ್ತು ಪಿಪಿಇ ಕಿಟ್ ಖರೀದಿ ಬಗ್ಗೆ ಉಲ್ಲೇಖಿಸಿದ್ದಾರೆ. ಯಾವುದೇ ಒಂದು ವಸ್ತು ಖರೀದಿ ಮಾಡುವ ಮುನ್ನ ಗುಣಮಟ್ಟದ ಪರಿಶೀಲನೆ ಮಾಡಲಾಗುವುದು. 500 ರೂ.ಗೆ ಚಪ್ಪಲಿ ದೊರೆಯುತ್ತವೆ. ಹಾಗೆಯೇ 9ಸಾವಿರ ರೂ.ಗಳಿಗೂ ಚಪ್ಪಲಿ ದೊರೆಯುತ್ತವೆ. ವಸ್ತುಗಳಿಗೂ ಹಾಗೆಯೇ ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯ ಬೆಲೆ ನಿಗದಿಯಾಗಿರುತ್ತದೆ. ಸಿದ್ದರಾಮಯ್ಯ ಏಕೆ ಆ ಮಟ್ಟದಲ್ಲಿ ಟೀಕೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಪ್ರವಾಹ ಮತ್ತು ಕೋವಿಡ್-19 ಸೋಂಕು ಸರ್ಕಾರದ ಬಲವನ್ನು ಅಲ್ಲಾಡಿಸಿದೆ. ಇಲ್ಲವಾದರೆ, ನಮ್ಮ ನೂರಾರು ಕನಸುಗಳು, ಅಭಿವೃದ್ಧಿ ಕಡೆಗೆ ದಾಪುಗಾಲು ಇಡಬಹುದಿತ್ತು. ಆದರೂ ನಾವು ಪ್ರಯತ್ನ ಮಾಡಿದ್ದೇವೆ. ಅನೇಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ರೈತರ ಜೀವನ, ಕೈಗಾರಿಕಾ, ವ್ಯಾಪಾರ ಕ್ಷೇತ್ರಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇವೆ. ಕೈಗಾರಿಕೆ ವಿಮೆಯನ್ನು ಜಾರಿಗೆ ತಂದು ಶೇ 25 ರಷ್ಟು ಸಬ್ಸಿಡಿ ನೀಡಿದ್ದೇವೆ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದ ಅನೇಕ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾತನಾಡಿ, ಸ್ಮಾರ್ಟ್ ಸಿಟಿ ಸಮಿತಿಯಲ್ಲಿ ಸಚಿವರು ಮತ್ತು ಸ್ಥಳೀಯ ಶಾಸಕ ಹೆಸರು ಸೇರಿಸಲಿಲ್ಲ. ಹಾಗಾಗಿ, ಕಾಮಗಾರಿಯಿಂದಾದ ತೊಂದರೆಗಳ ಕುರಿತು ಹೇಳಲು ಸಾಧ್ಯವಾಗುತ್ತಿಲ್ಲ. ಈ ವಿಚಾರದ ಬಗ್ಗೆ ನನಗೆ ನೋವಾಗುತ್ತಿದೆ ಎಂದು ವಿಷಾದಿಸಿದರು.

ABOUT THE AUTHOR

...view details