ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರ ಅಗತ್ಯಕ್ಕೆ ಪೂರಕವಾಗಿ ನೂತನ ತಂತ್ರಜ್ಞಾನ ಬಳಕೆಯ ಸೌಲಭ್ಯಗಳು ನಗರದ ವಿವಿಧೆಡೆ ಕಾಣಸಿಗುತ್ತವೆ. ಆದರೆ, ಅವುಗಳ ಅರಿವು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಜೊತೆಗೆ ಅನೇಕ ಯೋಜನೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ. ಒಂದಿಷ್ಟು ಕಡೆಗಳಲ್ಲಿ ಯಂತ್ರಗಳು ಹದಗೆಟ್ಟು ನಿಂತಿವೆ.
ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು ನಲವತ್ತು ಕಡೆಗಳಲ್ಲಿ ಎಮರ್ಜೆನ್ಸಿ ಪೋಲ್ಗಳನ್ನು ಅಳವಡಿಸಲಾಗಿದೆ. ಈ ಪೋಲ್ಗಳ ಮೂಲಕ ಸಾರ್ವಜನಿಕರು ನಗರದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಕಂಟ್ರೋಲ್ ರೂಮ್ಗೆ ತಮ್ಮ ಮಾಹಿತಿ ನೀಡಬಹುದಾಗಿದೆ. ತುಮಕೂರು ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಮ್ನಲ್ಲಿ ಇರುವ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ.