ತುಮಕೂರು:ಮಾಜಿ ಪ್ರಧಾನಮಂತ್ರಿ, ದೇವೇಗೌಡರನ್ನು ನಾನು ಸೋಲಿಸಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಮಾಣ ಮಾಡಿ ಸಾಬೀತುಪಡಿಸಲಿ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಗುಡುಗಿದ್ದಾರೆ.
ಗುಬ್ಬಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ನಾನು ಸೋಲಿಸಿದ್ದು ಎಂದು ಯಾವ ಮೂರ್ಖರು ಹೇಳಿದ್ದು?. ಬುದ್ಧಿವಂತ, ಪ್ರಬುದ್ಧ ರಾಜಕಾರಣಿಗಳು ಯಾರೂ ಹೀಗೆ ಮಾತಾಡಲ್ಲ ಎಂದಿದ್ದಾರೆ.
ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ನಿಖಿಲ್ ಕುಮಾರಸ್ವಾಮಿಯನ್ನು ಯಾರು ಸೋಲಿಸಿದ್ರು?. ಅವರನ್ನು ನಾನು ಸೋಲಿಸಿದ್ನಾ?. ದೇವೇಗೌಡರು ಸತ್ಯ ಹೇಳುತ್ತಾರೆ. ಸೋಲಿಗೆ ಯಾರು ಕಾರಣ ಎಂದು ಅವರೇ ಹೇಳಲಿ. ಅವರು ಯಾವ ದೇವಸ್ಥಾನ ಹೇಳುತ್ತಾರೋ ನಾನು ಅಲ್ಲಿಗೆ ಬರುತ್ತೇನೆ. ಅವರು ಪ್ರಮಾಣ ಮಾಡಿ ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲಿ ಎಂದು ಎಸ್.ಆರ್.ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಕಣ್ಣೀರಿಗೆ ಮತ ಹಾಕೋದಿದ್ರೆ 223 ಸ್ಥಾನ ಇವರೇ ಗೆಲ್ಲೋರು. ಕಣ್ಣೀರು ಹಾಕೋದು ದೊಡ್ಡ ಡ್ರಾಮಾ. ಇವರ ಡ್ರಾಮಾ ನೋಡಿ ನಾಟಕ ರತ್ನ ಗುಬ್ಬಿ ವೀರಣ್ಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕಣ್ಣೀರು ಹಾಕಿಕೊಂಡು ಜನರ ಬಳಿ ಹೋಗಬಾರದು ಎಂದು ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಾನು ಕೆಲಸ ಮಾಡಿದ್ದೇನೆ, ಕೂಲಿ ಕೊಡಿ ಎಂದು ಜನರ ಬಳಿ ಹೋಗಬೇಕು. ನಿನ್ನೆ ಸಮಾವೇಶಕ್ಕೆ ಬಂದವರು ಬೇರೆ ಕ್ಷೇತ್ರದ ಜನ. ಅವರು ಬಂದ ಜನರಲ್ಲ. ಕಾಸು ಕೊಟ್ಟು ತಂದ ಜನರು ಎಂದರು. ಜನರು ಬರದಂತೆ ನಾನು ಡಂಗುರ ಸಾರಿ ಬಿಟ್ಟೆ ಎಂದು ಆರೋಪಿಸಿದರು ಎಂದು ಶ್ರೀನಿವಾಸ್ ಹೇಳಿದರು.
ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಅವರೆಲ್ಲಾ ಯಾಕೆ ಹೋದರು?. ಅವರೆಲ್ಲಾ ಇವರಿಗಾಗಿ ತ್ಯಾಗ ಮಾಡಿರಲಿಲ್ವಾ?. ಅವರ ಕತ್ತುಕೊಯ್ದದ್ದು ಕುಮಾರಸ್ವಾಮಿ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ತವರು ಮನೆಗೆ ಕಳುಹಿಸದ ಬೇಸರ: ಮಕ್ಕಳನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ