ತುಮಕೂರು: ಮಂಡ್ಯದ ಹಾಲಿ ಸಂಸದರಾದ ಶಿವರಾಮೇಗೌಡ ಅವರು ಇತ್ತೀಚಿಗೆ ಚುನಾವಣಾ ಪ್ರಚಾರದ ವೇಳೆ ಬಲಿಜ ಸಮಾಜದ ಮುಖಂಡರು ಹಾಗೂ ಚಲನಚಿತ್ರ ನಟರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಬಲಿಜ ಸಮಾಜದ ಮುಖಂಡರಾದ ಕವಿತಾ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಬಲಿಜ ಸಮಾಜದಲ್ಲಿ ಅನೇಕ ಮುಖಂಡರು, ಸಮಾಜದ ಸೇವಕರು ಸೇರಿದಂತೆ ಇತಿಹಾಸ ಸೃಷ್ಟಿಸಿದ ಅನೇಕ ನಾಯಕರು, ದಾರ್ಶನಿಕರು ಇದ್ದಾರೆ. ಪ್ರಸ್ತುತವಾಗಿ ಚಲನಚಿತ್ರ ರಂಗದ ನಟರ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡರು ಜಾತಿ ನಿಂದನೆ ಮಾಡಿ, ಮಾತನಾಡಿರುವುದು ಖಂಡಿನೀಯ. ಚುನಾವಣಾ ಪ್ರಚಾರದಲ್ಲಿ ಜಾತ್ಯತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದರಾದ ಶಿವರಾಮೇಗೌಡ ಒಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದೇ ಪಕ್ಷದವರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರಾಗಲಿ ಈ ವಿಷಯದ ಬಗ್ಗೆ ಚಕಾರ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.