ಬೆಂಗಳೂರು :ತುಮಕೂರಿನ ಕೊರಟಗೆರೆ ತಾಲೂಕಿನ ಬರ್ಕ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ (Illegal mining) ನಡೆಸಿದವರ ವಿರುದ್ಧ ಕ್ರಮ ಜರುಗಿಸಿಲ್ಲವೇಕೆ ಎಂದು ಪ್ರಶ್ನಿಸಿರುವ ಹೈಕೋರ್ಟ್(High court), ಈ ಸಂಬಂಧ ಕ್ರಮ ಕೈಗೊಂಡು ವರದಿ (Report) ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ (State government)ನಿರ್ದೇಶಿಸಿದೆ.
ಅಕ್ರಮ ಗಣಿಗಾರಿಕೆ ಪ್ರಶ್ನಿಸಿ ಬರ್ಕ ಗ್ರಾಮದ ನಿವಾಸಿಗಳಾದ ಅಶ್ವತ್ಥಪ್ಪ ಹಾಗೂ ಇತರೆ ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ, ತುಮಕೂರು ಜಿಲ್ಲಾಧಿಕಾರಿ, ಕೊರಟಗೆರೆ ತಹಶೀಲ್ದಾರ್ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವ ಕುರಿತು ಮಾತ್ರ ಮಾಹಿತಿ ನೀಡಿದ್ದಾರೆ. ಅಲ್ಲದೇ, 4 ವಾಹನಗಳನ್ನು ಜಪ್ತಿ ಮಾಡಿ, 45 ಸಾವಿರ ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.