ತುಮಕೂರು: ಜಿಲ್ಲೆಯ ತಿಪಟೂರು ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿರುವ ವೀರ ಆಂಜನೇಯ ದೇವಾಲಯದಲ್ಲಿ ಶ್ರೀರಾಮ ನವಮಿ ದಿನದಂದೇ ಹುಂಡಿ ಕಳ್ಳತನವಾಗಿದೆ. ತಡ ರಾತ್ರಿ ಮೇಲ್ಛಾವಣಿ ಮುರಿದು ಒಳನುಗ್ಗಿದ ಖದೀಮರು ಹುಂಡಿ ಹೊತ್ತುಕೊಂಡು ಹೋಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಅರ್ಚಕ ದರ್ಶನ್, ಭಾನುವಾರ ರಾಮ ನವಮಿ ಆಚರಣೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿದ್ದರು. ನಿನ್ನೆ ತಡರಾತ್ರಿ ದೇವಾಲಯದ ಮೇಲ್ಭಾಗದಿಂದ ಇಳಿದಿರುವ ಕಳ್ಳರು ಹುಂಡಿ ಸೇರಿದಂತೆ ದೇವರಿಗೆ ಹಾಕಿದ ಬೆಲೆ ಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪೂಜೆಗೆ ಬಂದಾಗ ಖದೀಮರ ಕೃತ್ಯ ಬೆಳಕಿಗೆ ಬಂದಿದೆ ಎಂದರು.