ತುಮಕೂರು:ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ಗೆ ಹುಚ್ಚು ಹಿಡಿದವರು ಮಾತ್ರ ವಲಸೆ ಹೋಗುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬುದ್ಧಿ ನೆಟ್ಟಗೆ ಇರುವವರು ಯಾರೂ ಕೂಡ ಕಾಂಗ್ರೆಸ್ಗೆ ಹೋಗುವುದಿಲ್ಲ. ಸಚಿವರಾದ ಮಾಧುಸ್ವಾಮಿ ಹಾಗೂ ಅಶೋಕ್ ಅವರುಗಳಿಗೆ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ನೀಡದಿರುವುದರ ಹಿಂದೆ ಪಕ್ಷವು ಅವರನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಚಿಂತನೆ ಇರಬಹುದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ಅವರಿಬ್ಬರು ತುಂಬಾ ಆಪ್ತರಾಗಿದ್ದಾರೆ. ತುಮಕೂರು ಜಿಲ್ಲಾ ಉಸ್ತುವಾರಿ ಅವಕಾಶ ನನಗೆ ನಿರೀಕ್ಷೆಯಿರಲಿಲ್ಲ. ತುಮಕೂರು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಅಲ್ಲದೇ ಪ್ರಬುದ್ಧ ಜನಪ್ರತಿನಿಧಿಗಳು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಜಿಲ್ಲೆಯ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಲು ತೊಂದರೆಯಾಗುವುದಿಲ್ಲ ಎಂದರು.
ತಪೋ ಭೂಮಿಯಲ್ಲಿ ಧ್ವಜಾರೋಹಣ ನಡೆಸಿರುವುದು ನನ್ನ ಭಾಗ್ಯ: ಗಣರಾಜ್ಯೋತ್ಸವದ ನಿಮಿತ್ತ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿ ಮಠದ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.