ತುಮಕೂರು:ತುಮಕೂರಿನ ನಾಲ್ಕು ವರ್ಷದ ಪೋರನ ಹ್ಯಾಂಡ್ ಶ್ಯಾಡೋ ಫೋಟೋಗ್ರಫಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ದೊರೆತಿದೆ.
ತನ್ನ ಪುಟ್ಟ ಕೈ ಬೆರಳುಗಳಿಂದ ವಿವಿಧ ಆಕೃತಿಗಳನ್ನು, ಚಿತ್ರಗಳನ್ನು ಮೂಡಿಸುತ್ತಿರುವ ಈ ಬಾಲಕನ ಹೆಸರು ವಿಶಾಲ್. ತುಮಕೂರಿನ ಕ್ಯಾತಸಂದ್ರ ನಿವಾಸಿಗಳಾದ ಸುನೀತಾ ಮತ್ತು ಪುನೀತ್ ಕುಮಾರ್ ದಂಪತಿಯ ಮಗ. ಈತ ಬೆರಳುಗಳನ್ನು ಬಳಸಿ ಹ್ಯಾಂಡ್ ಶಾಡೋ ಫೋಟೋಗ್ರಫಿಯಲ್ಲಿ ವಿಶಿಷ್ಟವಾದ ಸಾಧನೆ ಮಾಡಿದ್ದಾನೆ. ಈ ಸಾಧನೆ ಗುರುತಿಸಿ ಈತನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಸಿಕ್ಕಿದೆ.
ಸಾಮಾನ್ಯವಾಗಿ ಮಕ್ಕಳು 1 ವರ್ಷ ವಯಸ್ಸಿನಲ್ಲಿ ತಾಯಿಯ ಸಾಮೀಪ್ಯ ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳ ಬಗ್ಗೆ ಆಸಕ್ತಿ ಇರುವುದಿಲ್ಲ. ಆದರೆ ವಿಶಾಲ್ ಒಂದು ವರ್ಷವಿದ್ದಾಗ ನೆರಳನ್ನು ನೋಡಿ ಖುಷಿ ಪಡುತ್ತಿದ್ದನಂತೆ. ಇದನ್ನು ಗಮಿನಿಸಿದ ತಾಯಿ ಸುನೀತಾ ಹಾಗೂ ತಂದೆ ಪುನೀತ್ ಕುಮಾರ್ ಮಗನ ಆಸಕ್ತಿ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ.
ಎಳೆಯ ಕಂದನಿಂದಲೂ ಹ್ಯಾಂಡ್ ಶ್ಯಾಡೋ ಫೋಟೋಗ್ರಫಿಯನ್ನು ರೂಢಿಸಿಕೊಂಡ ವಿಶಾಲ್ ನಾಲ್ಕರ ವರ್ಷದ ವಯಸ್ಸಿಗೆ ಸುಮಾರು 35ಕ್ಕೂ ಹೆಚ್ಚು ಶಾಡೋ ಕಲಾಕೃತಿಗಳನ್ನು ಬೆರಳಿನಲ್ಲಿ ಮೂಡಿಸಿದ್ದಾನೆ. ಇದರಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರ ಆಕೃತಿಗಳು ಒಳಗೊಂಡಿವೆ.
ಪೋಷಕರು ಮಗನ ಆಸಕ್ತಿಗೆ ಅಗತ್ಯವಾದ ತರಬೇತಿಯನ್ನು ಕೊಡಿಸಿದ್ದಾರೆ. ತಾಯಿಯೇ ಶಿಕ್ಷಕಿಯಾಗಿ ಎಲ್ಲವನ್ನು ನಿಭಾಯಿಸಿದ್ದಾರೆ. 2021 ನೇ ಸಾಲಿನ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ವಿಶಾಲ್ ಸ್ಥಾನ ಗಿಟ್ಟಿಸಿದ್ದಾನೆ. ಈ ಪುಟ್ಟ ಪೋರನ ಸಾಧನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.