ತುಮಕೂರು: 9 ವರ್ಷ ಕೆಎಎಸ್ ಅಧಿಕಾರಿಯಾಗಿದ್ದ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಸುಮಾರು 500 ಕೋಟಿಗಳಷ್ಟು ಹಣ ಸಂಪಾದನೆ ಮಾಡಿದ್ದಾರೆ. ಅದು ಯಾವ ರೀತಿ ಸಾಧ್ಯ ಎಂಬುದು ಊಹೆಗೂ ನಿಲುಕದ್ದು ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಆರೋಪಿಸಿದರು.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಇದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಹಲವು ಕಡೆ ಜೆಡಿಎಸ್ ಮುಖಂಡರು ಸಾಕಷ್ಟು ಉದ್ವೇಗದಿಂದ ಮಾತನಾಡುತ್ತಾರೆ ಎಂದರು.
ಇನ್ನು ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಬಲವಂತಪಡಿಸಿ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅವರನ್ನು ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಿರುತ್ತಾರೆ ಎಂದು ಆರೋಪಿಸಿದರು.
ಬಿಡಿಎ ಹಾಗೂ ಕೆಐಎಡಿಬಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಅಭ್ಯರ್ಥಿಯಾಗಿರುವ ಅನಿಲ್ಕುಮಾರ್ ಎಷ್ಟು ಪ್ರಮಾಣದ ಹಣವನ್ನು ಕೊಡಬಹುದು ಎಂಬುದು ಈ ಚುನಾವಣೆಯಲ್ಲಿ ಬಹಿರಂಗವಾಗಲಿದೆ ಎಂದರು.