ತುಮಕೂರು: ಉಕ್ರೇನ್ ಮತ್ತು ಭಾರತದ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಭಾರತದಲ್ಲಿ ವೈದ್ಯ ಶಿಕ್ಷಣ ಪದವಿ ಪಡೆಯುವವರಿಗೆ ಸಾಕಷ್ಟು ಸಿಲೆಬಸ್ ಅಳವಡಿಸಲಾಗಿರುತ್ತದೆ. ಆದರೆ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಕಡಿಮೆ ಸಿಲೆಬಸ್ ಇದ್ದು, ಪದವಿ ಪಡೆದವರಿಗೆ ಭಾರತದಲ್ಲಿ ಇನ್ನಷ್ಟು ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಕ್ರೇನ್, ರೊಮೇನಿಯಾ ಸೇರಿದಂತೆ ಪೂರ್ವ ಯುರೋಪಿಯನ್ ದೇಶಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಇದೆ. ಭಾರತದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪಠ್ಯಕ್ಕೆ ಕನಿಷ್ಠ ಐವರು ಪ್ರೊಫೆಸರ್ಗಳನ್ನು ನೇಮಿಸಬೇಕೆಂಬ ನಿಯಮವಿದೆ. ಆದರೆ ಪೂರ್ವ ಯೂರೋಪಿಯನ್ ದೇಶಗಳಲ್ಲಿ ಓರ್ವ ಪ್ರೊಫೆಸರ್ ಸಾಕಾಗುತ್ತದೆ. ಭಾರತದಲ್ಲಿ ಒಂದೊಂದು ವಿಭಾಗಕ್ಕೆ ಕನಿಷ್ಠ 15 ಮಂದಿ ಪ್ರೊಫೆಸರ್ಗಳನ್ನು ನೇಮಿಸಲೇಬೇಕಿದೆ. ಆದರೆ ಉಕ್ರೆನ್ನಲ್ಲಿ ಕೇವಲ 5 ಪ್ರೊಫೆಸರ್ಗಳು ಪಾಠ ಮಾಡಲಿದ್ದಾರೆ. ಹೀಗಾಗಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಹೊರೆ ಬೀಳಲಿದೆ ಎಂದರು.