ತುಮಕೂರು:ಜೆಡಿಎಸ್ ನಡೆಸುತ್ತಿರುವ ಜನತಾ ಜಲಧಾರೆ ಅಭಿಯಾನದಲ್ಲಿ ಎತ್ತಿನಹೊಳೆ ಯೋಜನೆ ಹಾಗೂ ಮಹದಾಯಿ, ಭದ್ರಾ ಮೇಲ್ದಂಡೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆಯೂ ಧ್ವನಿ ಎತ್ತಲಾಗಿದೆ. ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರ ಅರ್ಜಿ ಹಾಕಿದೆ. ಚುನಾವಣೆ ವೇಳೆಗೆ ಇದನ್ನು ಸರ್ಕಾರ ಮುನ್ನೆಲೆಗೆ ತರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಕ್ಷೇತ್ರದ ಹುಡುಕಾಟದಲ್ಲಿಯೇ ತೊಡಗಿದ್ದಾರೆ. ಹೀಗಿರುವಾಗ ಜೆಡಿಎಸ್ ಪಕ್ಷದ ಕುರಿತು ಮಾತನಾಡುವ ಯಾವ ನೈತಿಕತೆ ಅವರಿಗಿದೆ. 5 ವರ್ಷ ಮುಖ್ಯಮಂತ್ರಿಯಾಗಿದ್ದರೂ, ಮೈಸೂರು ಭಾಗದಲ್ಲಿ ಸೋಲು ಅನುಭವಿಸಿದರು. ರಾಜಕೀಯವಾಗಿ ತಿಳಿವಳಿಕೆ ಇಲ್ಲದವರು ಜೆಡಿಎಸ್ ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.