ತುಮಕೂರು: ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ 40ಕ್ಕೂ ಹೆಚ್ಚು ಸದಸ್ಯ ದೇಶಗಳ ತಂಡವು ತುಮಕೂರು ಜಿಲ್ಲೆ ಪಾವಗಡದಲ್ಲಿರುವ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ಗೆ ಭೇಟಿ ನೀಡಿದರು.
ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಪಾವಗಡ ಸೋಲಾರ್ ಪಾರ್ಕ್ಗೆ ಆಗಮಿಸಿದ ಯೂನಿಯನ್ ಆಫ್ ಕೋಮೋರೋಸ್ ರಿಪಬ್ಲಿಕ್ ಆಫ್ ಪಿಜಿ, ಫಾನಾ ಫೆಡರೇಶನ್ ಆಫ್ ಮಲೇಶಿಯಾ, ಮಾರ್ಷಿಯಸ್ ಉಗಾಂಡಾ, ಬ್ರೆಜಿಲ್, ಜಾಂಬಿಯೂ ಸೇರಿದಂತೆ ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ ಸದಸ್ಯ ದೇಶಗಳ ರಾಯಭಾರಿಗಳು, ಹೈಕಮೀಷನರ್ಗಳು ಹಾಗೂ ಐಎಸ್ಎ ಮುಖ್ಯಸ್ಥರು ಇಲ್ಲಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಸೋಲಾರ್ ಪಾರ್ಕ್ ಬಳಿ ಸೆಲ್ಫಿ ತೆಗೆದುಕೊಂಡು, ಸಸಿ ನೆಟ್ಟು ಖುಷಿಪಟ್ಟರು.
ಪಾವಗಡ ಸೋಲಾರ್ ಪಾರ್ಕ್ ಸಂರಚನೆಯನ್ನು ವೀಕ್ಷಿಸಿದ ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಮಾರು 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿಯನ್ನು ಉತ್ಪಾದಿಸುವ ಪಾವಗಡ ಸೋಲಾರ್ ಪಾರ್ಕ್ ಅನ್ನು ರೈತರಿಂದ ಎಕರೆಗೆ ವಾರ್ಷಿಕ 21 ಸಾವಿರ ರೂ. ಮೊತ್ತಕ್ಕೆ 28 ವರ್ಷಗಳ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಬಿರು ಬಿಸಿಲಿನಲ್ಲಿಯೇ ವಿದೇಶಿ ಗಣ್ಯರ ತಂಡವು ಪೊರ್ಟಮ್, ರೀನ್ಯೂ ಪವರ್, ಪಿಜಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಸೋಲಾರ್ ವಿದ್ಯುತ್ ತಯಾರಿಕೆಯ ಕುರಿತಂತೆ ಮಾಹಿತಿಯನ್ನು ಪಡೆಯಿತು. ಸೋಲಾರ್ ಪಾರ್ಕ್ ವೀಕ್ಷಿಸಿದ ಯೂನಿಯನ್ ಆಫ್ ಕೊಮಾರಸ್ (Union of comoros) ಕನ್ಸಲ್ ಕೆ.ಎಲ್. ಗಂಜು ಅವರು, ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ಕ್ ಅನ್ನು ಸ್ಥಾಪಿಸಿರುವುದು ಕರ್ನಾಟಕ ರಾಜ್ಯದ ಬಹುದೊಡ್ಡ ಸಾಧನೆ. ಇಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು ಉತ್ತಮ ಸೇವೆಯನ್ನು ದೇಶಕ್ಕೆ ನೀಡಲಿ ಎಂಬ ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಸೆಲ್ವ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಸೌರಶಕ್ತಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಜರಿದ್ದರು.