ತುಮಕೂರು:ವೈಕುಂಠ ಏಕಾದಶಿಗೆ ಮಾರುಕಟ್ಟೆಗೆ ಬಂದ ವಿವಿಧ ಬಗೆಯ ಹೂಗಳು ವ್ಯಾಪಾರವಾಗದೆ ಹೂವಿನ ಮಂಡಿಯಲ್ಲಿಯೇ ಉಳಿದ ಪರಿಣಾಮ ಲಾಭದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.
ಮುಗಿದ ವೈಕುಂಠ ಏಕಾದಶಿ ಹಬ್ಬದ ಸಡಗರ, ಪಾತಳಕ್ಕಿಳಿದ ಹೂವಿನ ದರ ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯಗಳಿಗೆ, ವಿಗ್ರಹಗಳಿಗೆ ಹಾಗೂ ದೇವರ ಮೂರ್ತಿಗಳ ಅಲಂಕಾರಕ್ಕೆ ಹೂವು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರವಾಗುತ್ತದೆ. ಆದರೆ ವ್ಯಾಪಾರ ಮಾಡಲು ವಿವಿಧ ರೀತಿಯ ಹೂಗಳನ್ನು ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಗೆ ತಂದಿದ್ದ ರೈತರಿಗೆ ಅವರ ನಿರೀಕ್ಷೆಯಂತೆ ವ್ಯಪಾರವಾಗದೇ ನಷ್ಟ ಅನುಭವಿಸುವಂತಾಗಿದೆ.
ದಸರಾ ಹಬ್ಬದ ಸಮಯದಲ್ಲಿ ದೇವಾಲಯಗಳ ಜೊತೆಗೆ ವಾಹನಗಳಿಗೂ ಅಲಂಕಾರ ಮಾಡಲು ಹೂಗಳನ್ನು ಸಿಂಗರಿಸಲಾಗುತ್ತಿತ್ತು. ಆದರೆ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರು ತಮಗೆ ಬೇಕಾದಷ್ಟು ಮಾತ್ರ ಹೂವನ್ನು ಖರೀದಿ ಮಾಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ವ್ಯಾಪಾರವಾಗಿಲ್ಲ. ಇನ್ನು ಹೂವುಗಳ ದರ ನೋಡುವುದಾದರೆ ಗುಲಾಬಿ ಹೂವಿನ ಕಟ್ಟು 100 ರೂ., ಕನಕಾಂಬರ ಒಂದು ಮಾರಿಗೆ 50ರಿಂದ 80 ರೂ., ಸೇವಂತಿಗೆ ಮಾರಿಗೆ 30 ರೂ., ಚಿಂತಾಮಣಿ ಹೂ ಕೆಜಿಗೆ 10 ರೂಗಳಾಗಿವೆ.
ಆದರೆ ಇಂದು ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹೂವನ್ನು ಕಟ್ಟಿದವರಿಗೆ ಕೂಲಿ ನೀಡಲು ಸಾಧ್ಯವಾಗದ ರೀತಿಯಲ್ಲಿ ಹೂವಿನ ಬೆಲೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು.