ತುಮಕೂರು: ಎಷ್ಟೇ ಪ್ರತಿಭಾವಂತ ವ್ಯಕ್ತಿ ಇದ್ದರೂ ಸಹ ಅವರನ್ನು ಗುರುತಿಸುವುದು ಜಾತಿಯ ಆಧಾರದ ಮೇಲೆ. ಆಧುನಿಕ ಜಗತ್ತಿನಲ್ಲಿಯೂ ಸಮಾನತೆ ದೊರೆಯುತ್ತಿಲ್ಲ, ಎಲ್ಲಿಯವರೆಗೆ ದೇಶದಲ್ಲಿ ಬದಲಾವಣೆ ಆಗುವುದಿಲ್ಲವೋ ಅಲ್ಲಿಯವರೆಗೂ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿ ಮಾತನಾಡಿದರು. ಯಾವುದೇ ದೇಶದಲ್ಲಿ ಇಂತಹ ಜಾತಿ ವ್ಯವಸ್ಥೆ ಇಲ್ಲ, ಭಾರತ ದೇಶದಲ್ಲಿ ಅತ್ಯಂತ ಪ್ರತಿಭಾವಂತ ವ್ಯಕ್ತಿಯಾಗಿದ್ದರೂ, ನಿಮ್ಮನ್ನು ಗುರುತಿಸುವುದು ಜಾತಿಯ ಆಧಾರದ ಮೇಲೆ. ಇದು ದುರ್ದೈವ ಸಂಗತಿ ಎಂದು ವಿಷಾದಿಸಿದರು.