ತುಮಕೂರು: ತಮಕೂರು ನಗರವನ್ನು ಅಭಿವೃದ್ಧಿಗೊಳಿಸುವ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹ ಸ್ವಚ್ಛತೆಗೆ ಕೈಜೋಡಿಸಿದೆ. ಆದರೆ, ಯೋಜನೆಗಳು ಯಶಸ್ವಿಯಾಗದೇ ಇರುವುದು ವಿಪರ್ಯಾಸದ ಸಂಗತಿ.
ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆ ವಿಫಲ ನಗರದಲ್ಲಿ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಒಣ ಕಸ, ಹಸಿ ಕಸ ಬೇರ್ಪಡಿಸಲು ಮಹಾನಗರ ಪಾಲಿಕೆ ಪ್ರತಿಯೊಂದು ಮನೆಗಳಿಗೆ ಎರಡು ಬಕೆಟ್ಗಳನ್ನು ನೀಡಿತ್ತು. ಆದರೆ, ಅವುಗಳ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ಯೋಜನೆ ಕೇವಲ ಕಾಟಾಚಾರಕ್ಕೆ ಎಂಬಂತೆ ಆಗಿದೆ.
ಸ್ಮಾರ್ಟ್ ಸಿಟಿ ವತಿಯಿಂದ ನಗರದ ಟೌನ್ಹಾಲ್, ಅಮಾನಿಕೆರೆ ಪಾರ್ಕ್, ತುಮಕೂರು ವಿವಿ ಬಳಿ, ಸಿದ್ದಗಂಗಾ ಬಸ್ ಸ್ಟಾಪ್ ಬಳಿ ಹೀಗೆ ಅನೇಕ ಸ್ಥಳಗಳಲ್ಲಿ ಕಸ ಹಾಕಲು ದೊಡ್ಡ ಬಕೆಟ್ಗಳನ್ನು ಇಡಲಾಗಿದೆ. ಆದರೆ, ಇವುಗಳಲ್ಲಿ ಯಾರೂ ಕಸ ಹಾಕುತ್ತಿಲ್ಲ. ಬದಲಾಗಿ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬರುತ್ತಿದೆ. ತುಮಕೂರು ವಿವಿ ಬಳಿಯ ಕಸದ ಬಕೆಟ್ನಲ್ಲಿ ಸರಿಯಾದ ನಿರ್ವಹಣೆ ಕೂಡ ಆಗುತ್ತಿಲ್ಲ. ಕಸದ ಬಕೆಟ್ ತುಂಬಿಹೋಗಿ ಅದರ ಸುತ್ತಲೂ ಪ್ಲಾಸ್ಟಿಕ್ ಕವರ್ಗಳು ಬಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
ಯೋಜನೆಗಳನ್ನು ಜಾರಿಗೆ ತಂದರೆ ಸಾಲದು, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ.