ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿ ಹಾಗೂ ಲಾಕ್ಡೌನ್ ಹಿನ್ನೆಲೆ ಸಿದ್ಧಗಂಗಾ ಮಠ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದೀಗ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿದೆ. ವಿದ್ಯಾಭ್ಯಾಸಕ್ಕಾಗಿ ದೂರದೂರುಗಳಿಂದ ವಿದ್ಯಾರ್ಥಿಗಳು ಸಿದ್ಧಗಂಗಾ ಮಠದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ಸಿದ್ಧಗಂಗಾ ಮಠದತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು ಈಗಾಗಲೇ ಸರ್ಕಾರದ ಸೂಚನೆ ಮೇರೆಗೆ ಆರರಿಂದ ಹತ್ತನೇ ತರಗತಿಯವರೆಗೆ ಶಾಲೆಗಳು ಆರಂಭವಾಗಿದ್ದು, ಮಕ್ಕಳ ದಾಖಲಾತಿ ಪ್ರಕ್ರಿಯೆ ಕೂಡ ಮಠದಲ್ಲಿ ಭರದಿಂದ ಸಾಗಿದೆ. ಕೊಪ್ಪಳ, ಹಾವೇರಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಗದಗ ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ.
ಶೈಕ್ಷಣಿಕ ಚಟುವಟಿಕೆ ಆರಂಭ:
ಪೋಷಕರು ತಮ್ಮ ಕೈಗಳಲ್ಲಿ ಅರ್ಜಿಗಳನ್ನು ಹಿಡಿದು ಮಕ್ಕಳೊಂದಿಗೆ ಮಠದ ಆವರಣದಲ್ಲಿ ಕುಳಿತುಕೊಂಡಿರುವ ದೃಶ್ಯ, ಅಗತ್ಯ ಸಾಮಗ್ರಿಗಳನ್ನು ಹಿಡಿದು ಮಠದತ್ತ ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಖಾಸಗಿ ಶಾಲೆಗಳಿಗೆ ದಾಖಲಿಸಲು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಪೋಷಕರು ಮಠದಲ್ಲಿಯೇ ಆಂಗ್ಲ ಮಾಧ್ಯಮ ಶಾಲೆಗೆ ದಾಖಲಿಸಲು ಮುಂದಾಗಿದ್ದಾರೆ.
ಈ ಮೂಲಕ ಮಠದಲ್ಲಿ ಮಕ್ಕಳ ಕಲರವ, ಎಂದಿನಂತೆ ನಿತ್ಯ ಸಾಮೂಹಿಕ ಪ್ರಾರ್ಥನೆ ಕಳೆಗಟ್ಟಿದೆ. ಒಂದೂವರೆ ವರ್ಷಗಳ ನಂತರ ಮಕ್ಕಳು ಸಾಮೂಹಿಕವಾಗಿ ಊಟದ ಹಾಲ್ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇದನ್ನೂ ಓದಿ:ಬಾಗಲಕೋಟೆ: ಕೊರೊನಾ ಜೊತೆ ವೈರಲ್ ಫೀವರ್ ಹಾವಳಿ.. ರೋಗಿಗಳಿಂದ ತುಂಬಿದ ಆಸ್ಪತ್ರೆಗಳು
ಕೊರೊನಾ ಸಂದರ್ಭದಲ್ಲಿ ಕೇವಲ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಮನೆಯಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆಯಿಲ್ಲದಂತಾಗಿತ್ತು. ಸಿದ್ಧಗಂಗಾ ಮಠ ಸೂಕ್ತ ಜಾಗ ಎಂದು ತಿಳಿದು, ಮಠದಲ್ಲಿ ಶಿಕ್ಷಣವನ್ನು ಮುಂದುವರೆಸಲು ನಿರ್ಧರಿಸಿರುವುದಾಗಿ ಪೋಷಕರು ತಿಳಿಸಿದ್ದಾರೆ.