ತುಮಕೂರು : ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭೆ ಕ್ಷೇತ್ರದ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಗೆಲ್ಲಿಸಲು ಎರಡೂ ಪಕ್ಷಗಳ ಮುಖಂಡರು ಕ್ಷೇತ್ರದಾದ್ಯಂತ ಸುತ್ತುತ್ತಿದ್ದಾರೆ.
ಜೆಡಿಎಸ್ ಶಾಸಕರಂತೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಲೀಡ್ ಕೊಡಬೇಕೆಂದು ನಿರಂತರ ಸಭೆಗಳನ್ನು ನಡೆಸಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಪೈಪೋಟಿಗೆ ಬಿದ್ದವಂತೆ ಪ್ರಚಾರ ನಡೆಸುತ್ತಿದ್ದು, ಬೆಳಗುಂಬ ಗ್ರಾಮದಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಅಣ್ಣ-ತಮ್ಮಂದಿರಂತೆ ಎಂದ ಗೌರಿಶಂಕರ್ ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳ ನಾಯಕರು ಯಾವ ಒಳ ಏಟನ್ನೂ ಕೊಡೋದಿಲ್ಲಾ. ಕ್ಷೇತ್ರದಲ್ಲಿ ಜೆಡಿಎಸ್ - ಕಾಂಗ್ರೆಸ್ ಅಣ್ಣ ತಮ್ಮಂದಿರಂತೆ ಇದ್ದೀವೆ. ಮೈಸೂರು ಪ್ರಾಂತ್ಯದಲ್ಲಿ ಮೊದಲಿಂದಲೂ ಸಹಜವಾಗಿ ಜಿದ್ದಾಜಿದ್ದಿ ನಡೆದಿದೆ. ತಕ್ಷಣ ಒಂದಾಗಲು ತಳಮಟ್ಟದ ಕಾರ್ಯಕರ್ತರಿಗೆ ಬೇಸರವಾಗಿರಬಹುದು. ಎಲ್ಲವೂ ಸರಿಯಾಗುತ್ತೆ ಎಂದುಕೊಂಡು ಎರಡೂ ಪಕ್ಷದವರು ಒಟ್ಟಾಗಿ ಕೆಲಸ ಮಾಡ್ತಿದ್ದೀವಿ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾರ್ಚ್ 13 ಅಥವಾ 14 ರಂದು ನಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು ಮುದ್ದಹನುಮೇಗೌಡರು ಸಹ ಭಾಗವಹಿಸಲಿದ್ದಾರೆ. ಈಗಾಗಲೇ ಅವರ ಬೆಂಬಲಿಗರಿಗೆ ಪ್ರಚಾರಕ್ಕೆ ಸೂಚನೆ ಕೊಟ್ಟಿದ್ದಾರೆ ಎಂದರು.